ಬೆಂಗಳೂರು: ಬಿಬಿಎಂಪಿಯ ವಾರ್ಡ್‌ವಾರು ಮರುವಿಂಗಡಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಪಾಲಿಕೆಗೆ ಮೂರು ವರ್ಷಗಳ ಬಳಿಕ ಚುನಾವಣೆ ನಡೆಯುವ ನಿರೀಕ್ಷೆ ಗರಿಗೆದರಿದೆ. ಬಿಜೆಪಿ ನೇತೃತ್ವದ ಸರ್ಕಾರವು ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಿ 2021ರ ಜನವರಿ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕಾಂಗ್ರೆಸ್ ಸರ್ಕಾರವು ಆಗಸ್ಟ್ 14ರಂದು ಹಿಂಪಡೆದಿತ್ತು. ನಂತರ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿತ್ತು. ಆನಂತರ 2011ರ ಜನಗಣತಿ ಆಧಾರದಲ್ಲಿ ಪಾಲಿಕೆಯ ವಾರ್ಡ್‌ಗಳ ಪುನರ್‌ವಿಂಗಡಣೆಯ ಕರಡು ಪಟ್ಟಿಯನ್ನು ಆಗಸ್ಟ್ 18ರಂದು ಪ್ರಕಟಿಸಿ, ಆಕ್ಷೇಪಣೆ ಮತ್ತು ಸಲಹೆ ನೀಡಲು 15 ದಿನಗಳ ಕಾಲಾವಕಾಶ ನೀಡಿತ್ತು.
ವಾರ್ಡ್‌ಗಳ ಮರುವಿಂಗಡಣೆಯ ಕರಡು ಪಟ್ಟಿಗೆ ಸಂಬಂಧಪಟ್ಟಂತೆ ಮೂರು ಸಾವಿರಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯು ಸ್ವೀಕೃತವಾಗಿದ್ದ ಆಕ್ಷೇಪಣೆ, ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವಾರ್ಡ್‌ಗಳ ಪುನರ್ ವಿಂಗಡಣಾ ಕರಡು ಅಧಿಸೂಚನೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಶಿಫಾರಸು ಮಾಡಿತ್ತು.