ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಲ್ಲಿನ ನಿರ್ವಹಣಾ ಸಮಿತಿಗಳಿಗೆ ಕೋವಿಡ್ ಸಂಬಂಧಿಸಿದಂತೆ ಬಿಬಿಎಂಪಿ ಆಗಸ್ಟ್ 14 ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈಗ ಆ ಮಾರ್ಗಸೂಚಿ ಸಂಬಂಧ ಪರಿಷ್ಕೃತ ಗೈಡ್‌ಲೈನ್ಸ್ ಹೊರಡಿಸಿದೆ.
ಕೋವಿಡ್-19 ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಅಡಿಯಲ್ಲಿ ಸಾಂಕ್ರಾಮಿಕ ರೋಗವೆಂದು ಸೂಚಿಸಲಾಗಿತ್ತು. ಈ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆಕ್ಷನ್ 4ರ ಅಡಿಯಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆಗೆ ಅಧಿಕಾರ ನೀಡಲಾಗಿತ್ತು.
ಈ ಸಂಬಂಧ ಅಪಾರ್ಟ್ಮೆಂಟ್ಗಳಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹಲವು ಸೂಚನೆಗಳನ್ನು ನೀಡಲಾಗಿತ್ತು. ಈಗಿರುವ ಸರ್ಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳ ಜೊತೆಗೆ, ಪಾಲಿಕೆ ಹೊರಡಿಸಿರುವ ಮಾರ್ಗಸೂಚಿಯಲ್ಲಿನ ಸೂಚನೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿತ್ತು.
ಅಪಾರ್ಟ್ಮೆಂಟ್ ಅಥವಾ ಕಾಂಪ್ಲೆಕ್ಸ್ಗಳ ಎಲ್ಲರೂ, ಅಲ್ಲಿಗೆ ಭೇಟಿ ನೀಡುವವರ ದೇಹದ ಉಷ್ಣಾಂಶ ತಪಾಸಣೆ ಮಾಡಬೇಕು. ಸ್ಯಾನಿಟೈಸೇಶನ್, ಮಾಸ್ಕ್ ಕಡ್ಡಾಯವಾಗಬೇಕು. ಬೇರೆಯವರು ಅಪಾರ್ಟ್ಮೆಂಟ್ಗಳಿಗೆ ಭೇಟಿ ಕೊಟ್ಟರೆ ಹೆಸರು ಮತ್ತು ಮೊಬೈಲ್ ಸಂಖ್ಯೆ ದಾಖಲಿಸಿರಬೇಕು. ಹೊರ ರಾಜ್ಯಗಳಿಗೆ ಭೇಟಿ ನೀಡಿದವರು ಆರ್ಟಿ-ಪಿಸಿಆರ್ 72 ಗಂಟೆಗಳ ಒಳಗಿನ ನೆಗೆಟಿವ್ ಫಲಿತಾಂಶದ ವರದಿ ತಂದಿರಬೇಕು. ಇಲ್ಲವಾದಲ್ಲಿ ಬಂದ ಮೇಲೆ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಬೇಕು ಹಾಗೂ ಫಲಿತಾಂಶ ಬರುವವರೆಗೆ ಹೋಂ ಕ್ವಾರಂಟೈನ್ ಆಗಬೇಕು ಎಂದು ಹೇಳಿತ್ತು.
ಈಜುಕೊಳಗಳು ಮುಚ್ಚಿಯೇ ಇರುತ್ತವೆ. ಆದರೆ, ಜಿಮ್ಗಳು ಶೇ.60ರಷ್ಟು ಜನರೊಂದಿಗೆ ಕಾರ್ಯ ನಿರ್ವಹಿಸಬಹುದು. 3 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳು ಮಾಸ್ಕ್ ಧರಿಸಿರುವಂತೆ ಪೋಷಕರು ನೋಡಿಕೊಳ್ಳಬೇಕು. ಜನ ಸೇರುವ, ಗುಂಪಾಗಿ ನಡೆಸುವ, ಸಾರ್ವಜನಿಕ ಅಥವಾ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಹೋಂ ಡೆಲಿವರಿ, ಕೊರಿಯರ್ ಇನ್ನಿತರೆ ಸೇವೆಗಳಿಗೆ, ಸೇವೆ ನೀಡುವವರು ಅಪಾರ್ಟ್ಮೆಂಟ್ನ ಹೊರಗಿನ ಗೇಟ್ ಅಥವಾ ಮುಖ್ಯ ಗೇಟ್‌ವರೆಗೆ ಮಾತ್ರ ಬರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿತ್ತು.