ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿರುವ ಆರೋಪಕ್ಕೆ ಶಿವಾನಂದ ವೃತ್ತದ ತಮ್ಮ ಸರ್ಕಾರಿ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಪ್ರತಿಕ್ರಿಯೆ ನೀಡಿದರು.
ನನ್ನ ಮೇಲೆ ಸಿಎಂ ಎರಡು ವಿಷಯ ಪ್ರಸ್ತಾಪ ಮಾಡಿದ್ದಾರೆ. ನಿನ್ನೆ ಮತ್ತು ಮೊನ್ನೆ ನಾನು ಸದನದಲ್ಲಿ ಇರಲಿಲ್ಲ. ಸಿಎಂ ಅವರು ಬಜೆಟ್ ಮೇಲೆ ಉತ್ತರ ಕೊಟ್ಟಿದ್ದಾರೆ. ವೀರಾವೇಶದಿಂದ ಮಾತಾಡಿದ್ದಾರೆ. ಅವರಿಗೆ ಸ್ವಲ್ಪವಾದರೂ ಕಾನೂನಿನ ಅರಿವು ಇದೆ ಎಂದು ಭಾವಿಸಿದ್ದೇವೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತ ಮುಚ್ಚಿ ಹಾಕಿದ್ದಾರೆ ಅಂತ ಹೇಳಿದ್ದಾರೆ. ಅವರೇ ಕೋರ್ಟ್ ಮುಂದೆ ಸರ್ಕಾರದ ಮುಂದೆ ಪ್ರತಿಪಾದನೆ ಮಾಡಿದ್ದಾರೆ. 16 ರಾಜ್ಯಗಳಲ್ಲಿ ಎಸಿಬಿ ಮತ್ತು ಲೋಕಾಯುಕ್ತ ಇದೆ. ಅಡ್ವೊಕೇಟ್ ಜನರಲ್ ಪ್ರತಿಪಾದನ ಮಾಡಿದ್ದಾರೆ ಎಂದರು.
ಎಸಿಬಿ ಪ್ರತ್ಯೇಕ ವಿಭಾಗ. ಲೋಕಾಯುಕ್ತಕ್ಕೂ, ಎಸಿಬಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನು ಸರ್ಕಾರದ ಅಡ್ವೋಕೆಟ್ ಜನರಲ್ ಹೇಳಿದ್ದಾರೆ. ಎಸಿಬಿ ಸರಿ ಮಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರದಲ್ಲಿ ಲೋಕಾಯುಕ್ತ ಮುಚ್ಚಿರಲಿಲ್ಲ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾದಲ್ಲಿ ಎಸಿಬಿ ಇದೆ. ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಅದನ್ನು ಯಾಕೆ ಮುಚ್ಚಿಲ್ಲ. ಚೌಕಿದಾರ್ ಅನ್ನೋರು ಏಕೆ ಇನ್ನು ಲೋಕಪಾಲ್ ಮಾಡಿಲ್ಲ? ಆದರೂ ನಿನ್ನೆ ಸಿಎಂ ಸದನದಲ್ಲಿ ಹಸಿ ಸುಳ್ಳು ಹೇಳಿದ್ದಾರೆ. ಸರ್ಕಾರ ಬಂದ ಕೂಡಲೇ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಇವರು ಎಸಿಬಿ ರದ್ದು ಮಾಡಿಲ್ಲ. ಕೋರ್ಟ್ ಹೇಳಿದ ಮೇಲೆ ಎಸಿಬಿ ರದ್ದು ಆಗಿದೆ. ಸತ್ಯಹರಿಶ್ಚಂದ್ರ ಮೊಮ್ಮಕ್ಕಳ ರೀತಿ ಮಾತನಾಡ್ತಾರೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.