ಬೆಂಗಳೂರು: ಕೂಡಲೇ ಕೋವಿಡ್ ಸಂಬಂಧಿತ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ಗಳೆಂದು ಘೋಷಿಸಬೇಕು. ಜೊತೆಗೆ ರಾಜ್ಯದ ಎಲ್ಲಾ ಶಿಕ್ಷಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ಹಾಕಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ತಮ್ಮ ಪತ್ರದಲ್ಲಿ ಅವರು, ಮೊದಲಿನಿಂದಲೂ ಚುನಾವಣೆಗಳು, ಜನಗಣತಿ ಸೇರಿದಂತೆ ಎಲ್ಲ ಆಪತ್ತುಗಳ ಸಂದರ್ಭದಲ್ಲಿ ಸರ್ಕಾರದ ಎಲ್ಲ ಕೆಲಸಗಳಿಗೂ ಶಿಕ್ಷಕರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಆದರೆ ಅಂತಹ ಕೆಲಸ ನಿರ್ವಹಣೆಯಲ್ಲಿ ಅವರಿಗೆ ಏನಾದರೂ ತೊಂದರೆ ಅನಾಹುತ ಸಂಭವಿಸಿದಲ್ಲಿ ಅವರಿಗೆ ನೀಡಬೇಕಾಗಿರುವ ಸುರಕ್ಷತೆ, ಆರೋಗ್ಯ ಸೌಲಭ್ಯ ಹಾಗೂ ಇತರ ಸವಲತ್ತುಗಳನ್ನು ನೀಡುವಲ್ಲಿ ಸರ್ಕಾರ ಆಸಕ್ತಿ ವಹಿಸದೇ ಇರುವುದು ತೀವ್ರ ವಿಷಾದದ ಸಂಗತಿ. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಬಂದಾಗಿನಿಂದ ಶಿಕ್ಷಕರನ್ನು ಕೋವಿಡ್ ಸೋಂಕಿತರನ್ನು ಗುರುತಿಸುವ ಕಾರ್ಯಕ್ಕೆ, ಸರ್ವೆ ಕಾರ್ಯಕ್ಕೆ, ಆರೈಕೆ ಕೇಂದ್ರಗಳ ಉಸ್ತುವಾರಿಗೆ, ಚೆಕ್ಪೋಸ್ಟಗಳಲ್ಲಿ, ಡಾಟಾ ಎಂಟ್ರಿ ಕಾರ್ಯಕ್ಕೆ ಹಾಗೂ ಜನ ಜಾಗೃತಿ ಕಾರ್ಯ ಸೇರಿದಂತೆ ಹಲವು ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಅಲ್ಲದೇ ಕೋವಿಡ್‍ನ ಭೀಕರತೆ ಮಧ್ಯೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಲೋಕಸಭೆಯೂ ಸೇರಿದಂತೆ ವಿಧಾನ ಸಭೆಯ ಉಪಚುನಾವಣೆಗಳಿಗೆ ಚುನಾವಣಾ ಕಾರ್ಯ ಮತ್ತು ಬಿಎಲ್ಓ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಈ ಉಪಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಹಲವು ಶಿಕ್ಷಕರು ಸಂಪರ್ಕದ ಕಾರಣದಿಂದ ಕೋವಿಡ್ ಸೋಂಕಿತರಾಗಿ ತೀವ್ರವಾಗಿ ಅಸ್ವಸ್ಥರಾಗಿ ಬಳಲುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಅವರಲ್ಲಿ ಹಲವು ಜನ ಶಿಕ್ಷಕರು ಅಸುನೀಗಿದ ದಾರುಣ ಘಟನೆಯು ಜರುಗಿರುವುದೂ ನನ್ನ ಗಮನಕ್ಕೆ ಬಂದಿದೆ. ಅಲ್ಲದೇ ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕರ ಪೈಕಿ ಸುಮಾರು 55 ಜನ ಶಿಕ್ಷಕರು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂಬುದು ಅಂಕಿ - ಅಂಶ ಸಮೇತ ತಿಳಿದು ಬಂದಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಅವರಲ್ಲಿ ಹಲವರಿಗೆ ಸೋಂಕು ತಗುಲಿದ್ದು, ಸುಮಾರು 17 ಜನ ಮೃತಪಟ್ಟಿದ್ದಾರೆ. ಅಲ್ಲದೇ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ 51 ಜನ ಶಿಕ್ಷಕರು ಕೋವಿಡ್‍ಗೆ ಬಲಿಯಾಗಿದ್ದಾರೆ. ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿಯೂ ಶಿಕ್ಷಕರನ್ನು ನಿಯೋಜಿಸಲಾಗಿತ್ತು ಅವರಲ್ಲಿ ಸುಮಾರು ಜನ ಸೋಂಕಿಗೆ ತುತ್ತಾಗಿದ್ದು ಒಂಬತ್ತು ಜನ ಶಿಕ್ಷಕರು ಮೃತರಾಗಿದ್ದು ಇದರಿಂದ ನನಗೆ ಅತೀವ ದುಃಖ ಉಂಟಾಗಿದೆ ಎಂದು ತಿಳಿಸಿದ್ದಾರೆ.