ಬೆಂಗಳೂರು: ಗುಜರಾತ್ ರಾಜ್ಯದ ಮಾದರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವಿಶ್ವವಿದ್ಯಾಲಯ ಆರಂಭಿಸಬೇಕು ಮತ್ತು ಕರಾವಳಿ ಪೊಲೀಸ್ ಪಡೆಗೆ ಸ್ಪೀಡ್‌ಬೋಟ್‌ಗಳನ್ನು ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದರು.
ರಾಜ್ಯದಲ್ಲಿನ ವಿಧಿವಿಜ್ಞಾನ ಪ್ರಯೋಗಾಲಯವನ್ನು ಮತ್ತಷ್ಟು ಆಧುನೀಕರಣಗೊಳಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಲು ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಫ್‌ಎಸ್‌ಎಲ್ ವಿಶ್ವವಿದ್ಯಾಲಯ ಆರಂಭಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಮಾದರಿಯಲ್ಲಿ ಎಫ್‌ಎಸ್‌ಎಲ್ ವಿಶ್ವವಿದ್ಯಾಲಯ ಪ್ರಾರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಕೇಂದ್ರಕ್ಕೆ ಮನವಿ ಮಾಡಲಾಗುವುದು. ವಿಶ್ವವಿದ್ಯಾಲಯ ಆರಂಭಕ್ಕೆ ಅನುಮತಿ ನೀಡಬೇಕು. ಅಲ್ಲದೇ, ಕರಾವಳಿ ಭಾಗದಲ್ಲಿಯೂ ಹೆಚ್ಚಿನ ಭದ್ರತೆ ಕೈಗೊಳ್ಳಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಸುಗಮವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮ ಪೊಲೀಸ್ ಇಲಾಖೆ ಸೂಕ್ತವಾಗಿದೆ. ಪೊಲೀಸ್ ಇಲಾಖೆಯಲ್ಲಿ ಹಿಂದೆ 22% ಹುದ್ದೆಗಳು ಖಾಲಿ ಇದ್ದವು. ಈಗ ನಾವು ಖಾಲಿ ಹುದ್ದೆಗಳ ಪ್ರಮಾಣ 11% ಕ್ಕೆ ಇಳಿಸಿದ್ದೇವೆ. ಮಾರ್ಚ್ ವರೆಗೆ 6% ಪ್ರಮಾಣಕ್ಕೆ ಇಳಿಸಲಿದ್ದೇವೆ. ಅಪರಾಧ ಚಟುವಟಿಕೆಗಳ ನಿಗ್ರಹ ಯಶಸ್ವಿಯಾಗಿ ಮಾಡ್ತಿದ್ದೇವೆ. ಡ್ರಗ್ ಜಾಲ ಭೇದಿಸುವಲ್ಲಿ ಮುನ್ನಡೆ ಸಾಧಿಸಿದ್ದೇವೆ. ವಿದೇಶಿ ಲಿಂಕ್ ಗಳನ್ನು ಭೇದಿಸಿದ್ದೇವೆ ಎಂದು ತಿಳಿಸಿದರು.