ಬೆಂಗಳೂರು:ಸೋಲಿಲ್ಲದ ಸರದಾರ ಎಂಬ ಹಿರಿಮೆಯ, ಸತತ 8 ಬಾರಿ ವಿಧಾನ ಪರಿಷತ್ಗೆ ಆಯ್ಕೆಗೊಂಡಿರುವಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಮೂರನೇ ಬಾರಿಗೆ ಹುದ್ದೆ ಅಲಂಕರಿಸುತ್ತಿದ್ದಾರೆ.
1946ರ ಏಪ್ರಿಲ್ 14 ರಂದು ಶಿವಲಿಂಗಪ್ಪ ಗುರಮ್ಮ ದಂಪತಿ ಪುತ್ರರಾಗಿ ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಜನಿಸಿದ್ದ ಹೊರಟ್ಟಿ ಬಿಎ ಪದವೀಧರ, ಪಕ್ಷೇತರರಾಗಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದ್ದರು. ಮೊದಲ ಬಾರಿಗೆ 1980 ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದು ವಿಧಾನಪರಿಷತ್ ಮೊಗಶಾಲೆ ಪ್ರವೇಶಿಸಿದ್ದರು.
ಪಕ್ಷೇತರ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಪರಿಷತ್ ಸದಸ್ಯರಾಗಿದ್ದ ಹೊರಟ್ಟಿ ನಂತರ ತೆನೆ ಹೊತ್ತು ಜೆಡಿಎಸ್ನಿಂದ 3 ಬಾರಿ ಆಯ್ಕೆಯಾಗಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಗಳಿಂದ ಜೆಡಿಎಸ್ ತೊರೆದು ಕೇಸರಿ ಪಕ್ಷಕ್ಕೆ ಸೇರಿ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಗೊಂಡು ಸಭಾಪತಿ ಸ್ಥಾನದ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಹೊರಟ್ಟಿ ನಡೆದಿರುವ ಗೆಲುವಿನ ದಾರಿ:
1980-1986 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1986-1992 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1992-1998 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1998-2004 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2004-2010 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2010-2016 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2016-2022 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2022 ರಿಂದ - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
ಸಚಿವ ಸ್ಥಾನ ನಿರ್ವಹಣೆ:ರಾಜ್ಯದಲ್ಲಿ ಮೊದಲ ಬಾರಿಗೆ ರಚನೆಗೊಂಡಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಧರಂ ಸಿಂಗ್ ಸಂಪುಟದಲ್ಲಿ ಮೊದಲ ಬಾರಿ ಸಚಿವ ಸ್ಥಾನ ಅಲಂಕರಿಸಿದ್ದ ಹೊರಟ್ಟಿ, 2004-2006 ರವರೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಸಣ್ಣ ಉಳಿತಾಯ ಖಾತೆ ನಿರ್ವಹಣೆ ಮಾಡಿದ್ದರು. ನಂತರ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿಯೂ 2006-2007 ಶಿಕ್ಷಣ ಸಚಿವರಾಗಿ ಹೆಸರು ಮಾಡಿದ್ದರು.