ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ₹65 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸಲು ರಾಜ್ಯ ಸರ್ಕಾರ ಯಶಸ್ವಿ : ಸಿಎಂ ಬೊಮ್ಮಾಯಿ - Basavaraja Bommai spoke on Davos World Economic forum

ನೆಸ್ಲೆ ಕಂಪನಿಯವರು 700 ಕೋಟಿ ಹೂಡಲು ಮುಂದೆ ಬಂದಿದ್ದಾರೆ. ನೈಡಲ್ ಕಂಪನಿ ಸುಮಾರು 4000 ಜನರಿಗೆ ಉದ್ಯೋಗ ನೀಡಲು ಮುಂದೆ ಬಂದಿದೆ. ಸುನೀಲ್ ಮಿತ್ತಲ್ ಅವರು ಮೆಗಾ ಡಾಟಾ ಸೆಂಟರ್ ತೆರೆಯಲು ಮುಂದೆ ಬಂದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು..

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

By

Published : May 27, 2022, 4:17 PM IST

ಬೆಂಗಳೂರು :ದಾವೋಸ್‌ನ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಅಂದಾಜು 65 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ದಾವೋಸ್‌ ವಿಶ್ವ ಆರ್ಥಿಕ ಶೃಂಗ ಸಭೆ ಕುರಿತು ಮಾಹಿತಿ ನೀಡಿದ ಅವರು, ಸುಮಾರು 25 ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇವೆ.

ಸುಮಾರು 65 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಒಪ್ಪಂದವಾಗಿದೆ. ಕರ್ನಾಟಕದ ಸ್ಕಿಲ್, ಮೂಲಸೌಕರ್ಯ, ಇಲ್ಲಿ ತಂತ್ರಜ್ಞಾನದ ಬಗ್ಗೆ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ದಾವೋಸ್‌ ಪ್ರಸಾದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿರುವುದು..

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಪ್ರತಿವರ್ಷ ದಾವೋಸ್‌ನಲ್ಲಿ ಆರ್ಥಿಕ ಶೃಂಗಸಭೆ ನಡೆಯುತ್ತದೆ. ಈ ಹಿಂದೆಯೂ ಹೆಚ್ ಡಿ ದೇವೇಗೌಡರು ಸೇರಿದಂತೆ ಅನೇಕ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಕೋವಿಡ್​ ನಂತರ ಇಡೀ ವಿಶ್ವದ ಆರ್ಥಿಕತೆ ಹಿನ್ನಡೆಯಾದ ಹಿನ್ನೆಲೆ ವಿಶ್ವದ ಉದ್ಯಮಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ದಾವೋಸ್​ನಲ್ಲಿ ಪ್ರಮುಖವಾಗಿ ಹವಾಮಾನ ಬದಲಾವಣೆ ಕುರಿತು ಮಹತ್ವದ ಚರ್ಚೆ ನಡೆಯಿತು. ಉದ್ಯಮಿಗಳು ಭಾರತಕ್ಕೆ ಆದ್ಯತೆ ನೀಡಿದ್ದಾರೆ.

ಯುರೋಪಿಯನ್ ರಾಷ್ಟ್ರಗಳು ಕೋವಿಡ್​ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಚೈನಾದಲ್ಲಿ ಈಗಲೂ ಕೋವಿಡ್ ಮುಂದುವರೆದಿದೆ. ಹೀಗಾಗಿ, ಉದ್ಯಮಿಗಳು ಭಾರತದೆ ಕಡೆಗೆ ನೋಡುವಂತೆ ಮಾಡಿದೆ. ಪ್ರಮುಖವಾಗಿ ನವೀಕರಣದ ಇಂಧನದ ಬಗ್ಗೆ ಹೆಚ್ಚು ಹೆಚ್ಚು ಹೂಡಿಕೆಗೆ ಅವಕಾಶಗಳು, ಚರ್ಚೆಗಳು ನಡೆದಿವೆ ಎಂದರು.

ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಘಟಕ ಸ್ಥಾಪನೆ :ಭಾರತದಿಂದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ತಮ್ಮದೇ ಆದ ಪೆವಿಲಿಯನ್ ಹಾಕಿದ್ದವು. ನಮ್ಮ ಪೆವಿಲಿಯನ್‌ಗೆ ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ಉದ್ಯಮಿಗಳು ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಜುಬಿಲಿಯಂಟ್ ಸಂಸ್ಥೆ 700 ಕೋಟಿ ರೂ. ಹೂಡಲು ತೀರ್ಮಾನ ಮಾಡಿದೆ.

ಹಿಟಾಚಿ ಕಂಪನಿ 2000 ಎಂಜಿನಿಯರ್‌ಗಳಿಗೆ ಉದ್ಯೋಗ ನೀಡಲು ಆಸಕ್ತಿ ತೋರಿದೆ. ಸಿಮೆನ್ಸ್ ಕಂಪನಿಯವರು 1300 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಯ್ಯೂರೊ ಗ್ರುಪ್‌ನವರು ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಂಪನಿ ಸ್ಥಾಪಿಸಲು ಮನವಿ ಮಾಡಿದ್ದೇವೆ ಎಂದರು.

ನೆಸ್ಲೆ ಕಂಪನಿಯವರು 700 ಕೋಟಿ ಹೂಡಲು ಮುಂದೆ ಬಂದಿದ್ದಾರೆ. ನೈಡಲ್ ಕಂಪನಿ ಸುಮಾರು 4000 ಜನರಿಗೆ ಉದ್ಯೋಗ ನೀಡಲು ಮುಂದೆ ಬಂದಿದೆ. ಸುನೀಲ್ ಮಿತ್ತಲ್ ಅವರು ಮೆಗಾ ಡಾಟಾ ಸೆಂಟರ್ ತೆರೆಯಲು ಮುಂದೆ ಬಂದಿದ್ದಾರೆ. ರಿನ್ಯೂ ಕಂಪನಿ ರಿನಿವಲ್ ಎನರ್ಜಿ ಕ್ಷೇತ್ರದಲ್ಲಿ 7 ವರ್ಷದಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಅದಾನಿ ಗ್ರೂಪ್‌ನವರು ರಿನಿವಲ್ ಎನರ್ಜಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ . ಆ್ಯಕ್ಸಿಸ್ ಬ್ಯಾಂಕ್ ಮುಂದೆ ಬಂದಿದೆ ಎಂದರು.

ನವೆಂಬರ್‌ನಲ್ಲಿ ಟೆಕ್ ಸಮ್ಮಿಟ್, ಹೂಡಿಕೆದಾರರ ಸಮಾವೇಶ :ನವೆಂಬರ್ 2-4ರವರೆಗೆ ಬಡವಾಳ ಹೂಡಿಕೆದಾರರ ಸಮಾವೇಶ, ನವೆಂಬರ್ 16 ಮತ್ತು 17 ಟೆಕ್ ಸಮ್ಮಿಟ್ ಮಾಡಲು ತೀರ್ಮಾನಿಸಲಾಗಿದೆ. ಕರ್ನಾಟಕದ ದೊಡ್ಡ ಪ್ರಮಾಣದ ಆರ್ಥಿಕ ಬೆಳವಣಿಗೆಯಾಗುವ ಸೂಚನೆ ಇದೆ. ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡಿ ಎಂಡ್ ಟು ಎಂಡ್ ಕೆಲಸ ಮಾಡುತ್ತೇವೆ ಎಂದರು.

ಭಾರತದಲ್ಲಿ ಕರ್ನಾಟಕಕ್ಕೆ ತನ್ನದೇ ಆದ ಮಹತ್ವ ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಬಾರದು. ಲಕ್ಷ್ಮಿ ಮಿತ್ತಲ್ ಅವರಿಗೆ ರಾಜ್ಯದ ಪಾಲಿಸಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸ್ಥಿರತೆ ಬಗ್ಗೆ ಅವರು ಸಾಮಾನ್ಯವಾಗಿ ಕೇಳಿದ್ದಾರೆ. ಅದನ್ನು ದೊಡ್ಡದಾಗಿ ಬಿಂಬಿಸಲಾಗಿದೆ. ಬೆಂಗಳೂರು ಮೂಲಸೌಕರ್ಯ ನವೆಂಬರ್ ಹೊತ್ತಿಗೆ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಸಿಎಂ ಹೇಳಿದಿಷ್ಟು.. : ರಾಜ್ಯದಲ್ಲಿ ಒಟ್ಟು 52 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಎರಡು ಸಂಸ್ಥೆಗಳೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಮಾಡಿದೆ. ಕರ್ನಾಟಕ ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ವಿಶ್ವ ಆರ್ಥಿಕ ಶೃಂಗಸಭೆ ಫಲಪ್ರದವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯಕ್ಕೆ ಹರಿದು ಬರುತ್ತಿರುವ ಬಹುದೊಡ್ಡ ಮೊತ್ತದ ಬಂಡವಾಳ ಇದಾಗಿದೆ.

ಈ ಹೂಡಿಕೆಗಳು ವಿಶ್ವದ ದೊಡ್ಡ ಕಂಪನಿಗಳು ಕರ್ನಾಟಕ ರಾಜ್ಯದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ದ್ಯೋತಕವಾಗಿದೆ. ಪವರ್‌ ಪ್ರೈ.ಲಿ, ಕಂಪನಿಯು 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಬ್ಯಾಟರಿ ಸ್ಕೋರೇಜ್, ಗ್ರೀನ್ ಹೈಡ್ರೋಜನ್​ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ.

₹37500 ಕೋಟಿ ಬಂಡವಾಳ ಹೂಡಿಕೆ :ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ 11900 ಕೋಟಿ ರೂ.ಗಳ ಬಂಡವಾಳ ಹೂಡಿ, ಮುಂದಿನ 2 ವರ್ಷಗಳಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಿವೆ. ಎರಡನೇ ಹಂತದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಹೈಡ್ರೋಜನ್​ ಘಟಕಗಳನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು 37500 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತದೆ ಎಂದರು.

ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ. ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿವೆ. ಈ ಒಪ್ಪಂದಗಳು ಕೈಗಾರಿಕೆ ಹಾಗೂ ಇಂಧನ ವಲಯದ ಅಭಿವೃದ್ಧಿಗೆ ಪೂರಕವಾಗಿದ್ದು, 40 ಸಾವಿರಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಗೆ ಅವಕಾಶವಾಗಲಿದೆ.

ಇದಲ್ಲದೇ ಹಲವಾರು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ ಎನರ್ಜಿ, ಸೀಮೆನ್ಸ್, ಅಬ್ ಇನ್ಬೇವ್, ದಸ್ಸಾಲ್ಟ್ ಸಿಸ್ಟಂ, ನೆಸ್ಲೆ, ಆರ್ಸೆಲಾರ್ ಮಿತ್ತಲ್ ಸಂಸ್ಥೆ ಭಾರತಿ ಎಂಟರ್ ಪ್ರೈಸಸ್, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡುವ ಭರವಸೆ ನೀಡಿವೆ. ಜ್ಯೂಬಿಲಿಯಂಟ್ ಗ್ರೂಪ್, ಜ್ಯೂಬಿಲಿಯಂಟ್ ಫುಡ್ ವರ್ಕ್ಸ್ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯೂಬಿಲಿಯಂಟ್ ಬಯೋಸಿಸ್ ರಾಜ್ಯ ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನವಾಗಿ ಆರ್ ಅಂಡ್ ಡಿ ಸೆಂಟರ್ ಸ್ಥಾಪಿಸಲು ತೀರ್ಮಾನಿಸಿದೆ.

ಈ ಸಂದರ್ಭದಲ್ಲಿ ಈಶಾ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್​ ಅವರೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಮಣ್ಣಿನ ಸಾವಯವ ಅಂಶ, ಫಲವತ್ತತೆಗಳ ಬಗ್ಗೆ ರಾಜ್ಯದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಓದಿ:ಸಚಿವಾಲಯ ನೌಕರರ ಬಂದ್ : 90% ಸಿಬ್ಬಂದಿ ಕೆಲಸಕ್ಕೆ ಗೈರು, ಬಿಗಿ ಪೊಲೀಸ್ ಭದ್ರತೆ

For All Latest Updates

TAGGED:

ABOUT THE AUTHOR

...view details