ಕರ್ನಾಟಕ

karnataka

ETV Bharat / state

Basavaraja Bommai: 'ವಿಷಯಾಂತರ ಬಿಟ್ಟು ಗುತ್ತಿಗೆದಾರರ ಸಂಶಯ ನಿವಾರಿಸಿ'- ಡಿಕೆಶಿಗೆ ಬೊಮ್ಮಾಯಿ ತಿರುಗೇಟು

Basavaraja Bommai: ಗುತ್ತಿಗೆದಾರರ ಬೇಡಿಕೆ ಈಡೇರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ​ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

By

Published : Aug 11, 2023, 5:58 PM IST

ಡಿಕೆಶಿಗೆ ಬೊಮ್ಮಾಯಿ ತಿರುಗೇಟು

ಬೆಂಗಳೂರು : ಗುತ್ತಿಗೆದಾರರ ಸಂಶಯ ನಿವಾರಣೆ ಮಾಡುವ ಕೆಲಸ ಬಿಟ್ಟು ರಾಜಕೀಯ ನಿವೃತ್ತಿ ಮಾತು ಹೇಳಿದ್ದಾರೆ. ಇಂತಹ ನಿಮ್ಮ ನಿವೃತ್ತಿ ಭಾಷಣವನ್ನು ನಾವು ಎಷ್ಟು ಕೇಳಿಲ್ಲ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.

ಮಹಾಲಕ್ಷ್ಮಿ ಲೇಔಟ್​ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಬಿಡುಗಡೆಯಾಗಿರುವ 650 ಕೋಟಿ ರೂ ಹಣವನ್ನು ಯಾಕೆ ಇಟ್ಟುಕೊಂಡಿದ್ದೀರಿ, 3 ತಿಂಗಳಾಗಿದೆ ತನಿಖೆಯಾಗಿರಬೇಕಲ್ಲವೇ? ನಾವು ಜನವರಿಯಲ್ಲಿ ಪಾವತಿ ಮಾಡಿ ನಂತರದ ಮೂರು ತಿಂಗಳಿಗೆ ಬೇಕಾದ ಹಣ ಬಿಡುಗಡೆ ಮಾಡಿದ್ದೇವೆ. ಅದನ್ನು ಪರಾಮರ್ಶೆ ಮಾಡಿ ಬಿಡುಗಡೆ ಮಾಡಬೇಕಲ್ಲವೇ? ಗುತ್ತಿಗೆದಾರರೇ ಆಣೆ ಪ್ರಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂಶಯ ನಿವಾರಣೆ ಮಾಡುವ ಕೆಲಸ ಮಾಡುವುದು ಬಿಟ್ಟು ರಾಜಕೀಯ ನಿವೃತ್ತಿ ಮಾತು ಹೇಳಿದ್ದಾರೆ ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಆದರೆ ಅವರದೇ ಸದಸ್ಯರು ಬಿಲ್ ಪಾವತಿಗೆ ಕಮಿಷನ್ ಕೇಳಿದ್ದಾರೆ ಎಂದು ನಿನ್ನೆ ಆರೋಪಿಸಿದ್ದರು. ಸುದ್ದಿಗೋಷ್ಟಿ ನಡೆಸಿ ಶಾಂಗ್ರಿಲಾ ಹೋಟೆಲ್​ನಲ್ಲಿ ಪರ್ಸೆಂಟೇಜ್ ನಡೆಯುತ್ತಿದೆ ಎಂದಿದ್ದರು. ಆದರೆ ಇಂದು ಯೂಟರ್ನ್ ಹೊಡೆದಿದ್ದಾರೆ. ಇದಕ್ಕೆ ಅವರೇ ಉತ್ತರ ಕೊಡಬೇಕು. ಯಾಕೆ ಯೂಟರ್ನ್ ಹೊಡೆದರು? ಯಾಕೆ ಆಪಾದನೆ ಮಾಡಿದರು? ಕ್ಲೀನ್ ಚಿಟ್ ಯಾಕೆ ಕೊಟ್ಟರು? ಅವರಿಗೆ ಏನಾದರೂ ಒತ್ತಡ ಇದೆಯಾ? ಎಂದು ತಿಳಿಸಬೇಕು.

ಕ್ಲೀನ್ ಚಿಟ್ ಕೊಟ್ಟರೆ ಗುತ್ತಿಗೆದಾರರಿಗೆ ಪರಿಹಾರ ಸಿಗಬೇಕಲ್ಲ?. ಈಗ ಅವರ ಸಮಸ್ಯೆ ಯಾರು ಪರಿಹರಿಸುವವರು, ನಾವು ಮಾರ್ಚ್​ ವರೆಗಿನ ಹಣ ಬಿಡುಗಡೆ ಮಾಡಿದ್ದು, ಅದನ್ನು ಕೊಡಬೇಕಲ್ಲ?. ಡಿ.ಕೆ.ಶಿವಕುಮಾರ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಕಾರಣ ಕೆಂಪಣ್ಣ ಬಳಿ ಹೋಗಿದ್ದಾರೆ. ನಂತರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳ ನಂತರ ರಾಜ್ಯಪಾಲರ ಬಳಿ ಹೋಗಿದ್ದಾರೆ. ಹಿಂದೆ ಹೀಗಾಗಿತ್ತಾ? ಬಿಬಿಎಂಪಿ ಸಂಗ್ರಹಿಸಿದ ಹಣವನ್ನೂ ಕೊಡುತ್ತಿಲ್ಲ. ಸರ್ಕಾರದ ಹಣವನ್ನೂ ಕೊಡುತ್ತಿಲ್ಲ ಎಂದರೆ ಕೆಲಸ ಹೇಗೆ ನಡೆಯಬೇಕು? ಗುತ್ತಿಗೆದಾರರು ದಯಾಮರಣ ಕೇಳಿದ್ದಾರೆ.

ಇಂತಹ ಘಟನೆ ಹಿಂದೆ ನಡೆದಿರಲಿಲ್ಲ. ಇದನ್ನು ರಾಹುಲ್ ಗಾಂಧಿ ಗಮನಕ್ಕೆ ತಂದು ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಮಧ್ಯಪ್ರವೇಶಿಸುವ ಇಚ್ಛಾಶಕ್ತಿ ಇಲ್ಲ. ಹಾಗಾಗಿ ಇದು ಎಟಿಎಂ ಸರ್ಕಾರ ಎನ್ನುವುದು ನಿಜವಾಗುತ್ತಿದೆ. ಅಂದು ವಿಧಾನಸೌಧದಲ್ಲಿ ಕಿವಿ ಮೇಲೆ ಹೂ ಇಟ್ಟುಕೊಂಡಿದ್ದಿರಿ, ಈಗ ಜನರ ಕಿವಿ ಮೇಲೆ ಹೂ ಇಡುತ್ತಿದ್ದೀರಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಬಾಕಿ ಬಿಲ್ ನೀಡದಿದ್ದರೆ ಕಾನೂನಾತ್ಮಕ ಹೋರಾಟ : ಬೊಕ್ಕಸದಲ್ಲಿ ಹಣ ಇದ್ದರೆ ಅಷ್ಟೆ ಅಲ್ಲ, ಕಾಮಗಾರಿಗಳೂ ಆಗಬೇಕು. ಕಾಮಗಾರಿ ಆಗದಿದ್ದರೆ ಬ್ರ್ಯಾಂಡ್ ಬೆಂಗಳೂರು ಮಾತು ಕೇವಲ ಮಾತಾಗಿರಲಿದೆ ಅಷ್ಟೆ. ಎಲ್ಲ ಇಲಾಖೆ ಅವರ ಬಳಿ ಇದೆ. ಅಗತ್ಯ ಮಾಹಿತಿ ತರಿಸಿಕೊಳ್ಳಲಿ, ಪಾಲಿಕೆಯಲ್ಲಿಯೂ ಹಲವು ವರ್ಷಗಳಿಂದ ಬಿಲ್ ಬಾಕಿ ಇದೆ. ನಾವು ಬಂದ ನಂತರ ಆನ್ ಲೈನ್ ವ್ಯವಸ್ಥೆ ಮಾಡಿದ್ದೇವೆ. ಇದನ್ನು ಸರಿಯಾಗಿ ನಿರ್ವಹಿಸಿದರೆ ವ್ಯವಸ್ಥೆ ಸರಿಯಾಗಲಿದೆ. ಈಗಾಗಲೇ ಬಹಳ ತಡವಾಗಿದೆ. ಹಾಗಾಗಿ ಕೂಡಲೇ ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ ಪಾವತಿ ಮಾಡಬೇಕು. ಇಂದು ಅವರು ಪಾವತಿ ಮಾಡಲಿದ್ದಾರಾ ಎಂದು ಕಾದು ನೋಡುತ್ತೇವೆ. ಇಲ್ಲದೇ ಇದ್ದಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಹೇಳಿದರು.

ಇದನ್ನೂ ಓದಿ :ತನಿಖೆಯಲ್ಲಿ ತಪ್ಪು ಮಾಡಿಲ್ಲ ಅನ್ನೋದು ಸಾಬೀತಾದರೆ ಗುತ್ತಿಗೆದಾರರ ಬಿಲ್ ಕೊಡುತ್ತೇವೆ: ಸಿಎಂ‌ ಸಿದ್ದರಾಮಯ್ಯ

ABOUT THE AUTHOR

...view details