ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು : ಆನೆ ಅರ್ಜುನ ಸಾವಿನ ಬಗ್ಗೆ ಸರ್ಕಾರ ಸತ್ಯ ಮುಚ್ಚಿಡುವ ಕೆಲಸ ಮಾಡುತ್ತಿದೆ. ಅದೇ ಕಾರಣಕ್ಕೆ ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಆರ್ ಟಿ ನಗರ ನಿವಾಸದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ಅರಾಜಕತೆ ನಡೆಯುತ್ತಿದೆ. ಐಎಫ್ಎಸ್ ಅಧಿಕಾರಿಗಳ ಹಿಂಡು ಬೆಂಗಳೂರಿನಲ್ಲಿ ಆನೆ ಹಿಂಡಿನಂತಿದ್ದಾರೆ. ಅವರನ್ನು ನಾನು ಕಾಡಿಗೆ ಕಳುಹಿಸುವ ಕೆಲಸ ಮಾಡಿದ್ದೆ. ಈಗ ಮತ್ತೆ ವಾಪಸ್ ಬರುವ ಕೆಲಸ ಮಾಡುತ್ತಿದ್ದಾರೆ. ಐಎಫ್ಎಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರಿಗೆ ಅರಣ್ಯದ ಜವಾಬ್ದಾರಿ ನೀಡಿ ಕಾಡಿಗೆ ಕಳುಹಿಸಬೇಕು. ಆನೆ ಅರ್ಜುನ ಹಾಗೂ ಬೆಂಗಳೂರಿನ ಚೀತಾ ಸಾವಿನ ಪ್ರಕರಣದಲ್ಲಿ ಸರಿಯಾದ ತರಬೇತಿ ಇಲ್ಲದಿರುವುದು ಕಾರಣವಾಗಿದೆ ಎಂದು ಹೇಳಿದ್ದಾರೆ.
ರೈತರ ಸಾಲ ವಸೂಲಿ ನಿಲ್ಲಿಸಲಿ :ರಾಜ್ಯದಲ್ಲಿ ಬರದಿಂದ ರೈತರು ಕಂಗಾಲಾಗಿದ್ದಾರೆ. ಬರಗಾಲಕ್ಕೆ ಹಣ ಬಿಡುಗಡೆ ಮಾಡಿಲ್ಲ. ರೈತರಿಗೆ ಬೆಳೆ ಇಲ್ಲ, ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಸರ್ಕಾರ ಇದುವರೆಗೂ ಬಿಡಿಗಾಸು ನೀಡಿಲ್ಲ. ಕೇಂದ್ರದ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಹಿಂದೆ ಪ್ರವಾಹ ಬಂದಾಗ ನಾವು ಒಂದು ತಿಂಗಳಲ್ಲಿ ಡಿಬಿಟಿ ಮುಖಾಂತರ ರೈತರಿಗೆ ಸುಮಾರು 2000 ಕೋಟಿ ರೂ. ಬಿಡುಗಡೆ ಮಾಡಿದ್ದೆವು. ಅವರು ಕೇವಲ 2000 ಸಾವಿರ ನೀಡುತ್ತೇನೆ ಎನ್ನುತ್ತಾರೆ. ಇದು ರೈತರಿಗೆ ಅವಮಾನ ಮಾಡಿದಂತೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ನಿಯಮದಂತಾದರೂ ಒಣ ಬೇಸಾಯಕ್ಕೆ ಪ್ರತಿ ಹೆಕ್ಟೇರ್ಗೆ ಕನಿಷ್ಠ 6000 ರೂ., ನೀರಾವರಿಗೆ 18 ಸಾವಿರ ರೂ. ನೀಡುವ ಕೆಲಸ ಮಾಡಬೇಕು. ನಾವು ರೈತರಿಗೆ ರಾಜ್ಯದಿಂದಲೂ ಕಿಸಾನ್ ಸಮ್ಮಾನ್ ಹಣ ನೀಡುತ್ತಿದ್ದೆವು, ಅದನ್ನು ಈ ಸರ್ಕಾರದಲ್ಲಿ ನಿಲ್ಲಿಸಿದ್ದಾರೆ. ರೈತರಿಂದ ಸಾಲ ವಸೂಲಿ ನಿಲ್ಲಿಸಬೇಕು. ಕೂಡಲೇ ಹೊಸ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮಾಜಿ ಸಿಎಂ ಹೇಳಿದರು.
ಹೈಕಮಾಂಡ್ ಮಾತನಾಡುತ್ತಾರೆ : ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ವಿ ಸೋಮಣ್ಣ ಅವರ ನಡೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಸೋಮಣ್ಣ ಹಿರಿಯ ನಾಯಕರು, ಅವರ ಬಗ್ಗೆ ಪಕ್ಷದ ಹೈಕಮಾಂಡ್ಗೆ ಎಲ್ಲವೂ ಗೊತ್ತಿದೆ. ಅವರು ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗುವುದಾಗಿ ಹೇಳಿದ್ದಾರೆ. ಹೈಕಮಾಂಡ್ ಅವರನ್ನು ಕರೆದು ಮಾತನಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಷಯಕ್ಕೂ ಹೈಕಮಾಂಡ್ ಮಾತನಾಡುತ್ತದೆ ಎಂದರು. ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆ ತಪ್ಪು ಕಲ್ಪನೆಯಿಂದ ಕೂಡಿದೆ. ಸಂಘದಲ್ಲಿ ದಲಿತ ಸಮುದಾಯದವರೂ ಎತ್ತರ ಮಟ್ಟದಲ್ಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಡಿಕೆಶಿ ಉತ್ತರಿಸಲಿ :ಇನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅಧಿವೇಶನದಲ್ಲಿ ಪಾಲ್ಗೊಳ್ಳದೆ ತೆಲಂಗಾಣ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯದ ಜನರ ಸಮಸ್ಯೆ ಮುಖ್ಯಾನೊ, ರಾಜಕೀಯ ಮುಖ್ಯನೋ ಎನ್ನುವುದನ್ನು ಅವರೇ ಹೇಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ :ಕ್ಯಾಪ್ಟನ್ ಅರ್ಜುನ ಆನೆ ಅಂತ್ಯಕ್ರಿಯೆ; ಎದ್ದೇಳೋ ಕಂದ ಎನ್ನುತ್ತಾ ಆತ್ಮೀಯ ಗೆಳೆಯನಿಗೆ ಮಾವುತ ವಿನು ಕಣ್ಣೀರ ವಿದಾಯ