ಬೆಂಗಳೂರು: "ಬಿಜೆಪಿಗೆ ಮತ ಹಾಕಿದವರು ರಾಕ್ಷಸರು"ಎನ್ನುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಹೇಳಿಕೆ ಖಂಡನೀಯವಾಗಿದ್ದು, ಇದು ಮತದಾರರಿಗೆ ಮಾಡಿದ ಅವಮಾನವಾಗಿದೆ. 'ಬಿಜೆಪಿ ವಿರುದ್ಧ ಮಾತನಾಡುವ ಕಾಂಗ್ರೆಸ್ನವರು ಏನು ತೊಳೆದ ಮುತ್ತಾ? ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದರು ಎಂಬುದೂ ಗೊತ್ತು' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಬಿಜೆಪಿಗೆ ಮತಹಾಕಿದವರು ರಾಕ್ಷಸರು ಎನ್ನುವ ಸುರ್ಜೆವಾಲಾ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರ ಮಾತು ಭಾರತದ ನಾಗರಿಕರಿಗೆ ಮಾಡಿದ ಅವಮಾನ. ಕಾಂಗ್ರೆಸ್ನವರು ಏನು ತೊಳೆದ ಮುತ್ತಾ ? ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದರು ಎಂಬುದೂ ಗೊತ್ತು. ಇದು ಅಕ್ಷಮ್ಯ, ಅಮಾನವೀಯ ಇದನ್ನು ಖಂಡಿಸುತ್ತೇವೆ ಎಂದರು.
ಎನ್ಇಪಿ ರದ್ದು ವಿಚಾರ:ಸಿದ್ದರಾಮಯ್ಯ ಸರ್ಕಾರ ಎನ್ ಇ ಪಿ ರದ್ದು ಮಾಡುತ್ತೇವೆ ಎನ್ನುವುದು ಆಶ್ಚರ್ಯ ತಂದಿದೆ. 2013 ರಲ್ಲಿಯೇ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಅದರ ಅಧ್ಯಕ್ಷರು ಕಸ್ತೂರಿ ರಂಗನ್ ಅವರೇ ಇಡೀ ದೇಶದ ಶಿಕ್ಷಣ ನೀತಿ ಜಾರಿಗೆ ಮಾಡಿದ್ದಾರೆ. ಕೇವಲ ರಾಜಕಾರಣ ಮಾಡುವ ಉದ್ದೇಶದಿಂದ ಎನ್ ಇ ಪಿ ವಿರೋಧ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊಡ್ಡ ಹೊಡೆತ ನೀಡಲಿದೆ. ಸಿದ್ದರಾಮಯ್ಯ ಕಾಮಾಲೆ ಕಣ್ಣಿನಿಂದ ನೋಡದೆ ಮತ್ತೊಮ್ಮೆ ಪರಾಮರ್ಶೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಹಾಗೂ ಪಾಲಕರೊಂದಿಗೆ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.