ಬೆಂಗಳೂರು:ರಾಜ್ಯ ಸರ್ಕಾರ ಕೇಂದ್ರ ಅನುದಾನದ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಪಾಲು ಹೆಚ್ಚಾಗಿದ್ದರೆ, ರಾಜ್ಯ ಸರ್ಕಾರವೂ ಅನುದಾನದ ಪಾಲೂ ಹೊಂದಿರುತ್ತದೆ. ಇದೀಗ 2022-23 ಸಾಲಿನ ಆಯವ್ಯಯ ವರ್ಷದ ಮುಕ್ಕಾಲು ಭಾಗ ಕಳೆದು ಹೋಗಿದೆ. ಆದರೆ, ಬಹುತೇಕ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಷ್ಟೇ ಅಲ್ಲ, ಬೊಮ್ಮಾಯಿ ಸರ್ಕಾರವೇ ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಸುಮ್ಮನೆ ಕುಳಿತಿದೆ.
ಹೌದು, ಹಲವು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೂ ಗರಿಷ್ಠ ಶೇ 50ರಷ್ಟರವರೆಗೆ ಅನುದಾನ ನೀಡುತ್ತದೆ. 2022-23 ಸಾಲಿನ ಒಂಬತ್ತು ತಿಂಗಳು ಕಳೆದ ಹೋಗಿದೆ. ಆದರೆ ಕೇಂದ್ರಾನುದಾನಿತ ಯೋಜನೆಗಳ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವ ಬಗ್ಗೆ ಈಗಾಗಲೇ ಈಟಿವಿ ಭಾರತ ವರದಿ ಮಾಡಿದೆ.
ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಬಿಜೆಪಿ ಸರ್ಕಾರ ಪದೇ ಪದೆ ಹೇಳುತ್ತಲೇ ಇದೆ. ಆರ್ಥಿಕ ವರ್ಷದ ಎಂಟು ತಿಂಗಳಾದರೂ ರಾಜ್ಯದ ವಿವಿಧ ಕೇಂದ್ರ ಪುರಸ್ಕೃತ ಯೋಜನೆಯ ಪ್ರಗತಿ ಇನ್ನೂ ಟೇಕ್ ಆಫ್ ಆಗಿಲ್ಲ. ರಾಜ್ಯದಲ್ಲಿ ಸುಮಾರು 20 ಇಲಾಖೆಗಳಲ್ಲಿ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. ಕೇಂದ್ರ ಸರ್ಕಾರ ಹಲವು ಯೋಜನೆಗಳಿಗೆ ತನ್ನ ಪಾಲಿನ ಬಿಡಿಗಾಸು ಅನುದಾನ ಬಿಡುಗಡೆ ಮಾಡದಿರುವುದು ಮಾತ್ರವಲ್ಲ, ರಾಜ್ಯ ಸರ್ಕಾರವೇ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದೆ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪುರಸ್ಕರಿಸುತ್ತಿಲ್ಲ.
ರಾಜ್ಯದ ಪಾಲಿನ ಅನುದಾನ ಏನು..ರಾಜ್ಯದಲ್ಲಿ ಸುಮಾರು 20 ಇಲಾಖೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳು ಚಾಲ್ತಿಯಲ್ಲಿವೆ. ಇದಕ್ಕೆ ಕೇಂದ್ರ ಸರ್ಕಾರ ತನ್ನ ಅನುದಾನದ ಪಾಲನ್ನು ನೀಡಿದರೆ, ರಾಜ್ಯ ಸರ್ಕಾರವೂ ತನ್ನ ಪಾಲಿನ ಅನುದಾನ ನೀಡುತ್ತದೆ. ಅದರಂತೆ 2022-23 ಸಾಲಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈವರೆಗೆ 17,071 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಇನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವುದು 21,417.97 ಕೋಟಿ ರೂ. ಈ ಪೈಕಿ ರಾಜ್ಯ ಸರ್ಕಾರ ಡಿಸೆಂಬರ್ ಅಂತ್ಯದ ವರೆಗೆ ತನ್ನ ಪಾಲಿನ 7,484 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಈವರೆಗೆ 8,239 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಈವರೆಗೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ತನ್ನ ಪಾಲಿನ 8,587 ಕೋಟಿ ರೂ. ಅನುದಾನ ಖರ್ಚು ಮಾಡಿದೆ. ಅದೇ ಕೇಂದ್ರ ಸರ್ಕಾರದ 9,270 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ಆ ಮೂಲಕ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈವರೆಗೆ ಒಟ್ಟು 17,858 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಡಿಸೆಂಬರ್ ವರೆಗೆ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ 46.20ರಷ್ಟು ಮಾತ್ರ.