ಬೆಂಗಳೂರು : ಹಾವೇರಿ ಜಿಲ್ಲೆಯ ಹಾನಗಲ್ನ ವಸತಿ ಲಾಡ್ಜ್ವೊಂದರಲ್ಲಿ ಜೋಡಿಯ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ. ಅಮಾಯಕರ ಮೇಲೆ ಹಲ್ಲೆ ನಡೆಸಿರುವ ಎಲ್ಲರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.
ಯುವತಿಯ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ರೀತಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಪುಂಡರು ರಾಜಾರೋಷವಾಗಿ ಓಡಾಡಲು ಬಿಟ್ಟಿರುವುದನ್ನು ನೋಡಿದರೆ, ರಾಜ್ಯದಲ್ಲಿ ಸರ್ಕಾರ ಜೀವಂತ ಇದೆಯಾ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಇಂತಹ ಹೀನ ಕೃತ್ಯ ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿರುವುದೇಕೆ? ಎಂದು ಪ್ರಶ್ನಿಸಿರುವ ಬೊಮ್ಮಾಯಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ.
ಹಾವೇರಿಎಸ್ಪಿ ಹೇಳಿಕೆ :ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಂಶುಕುಮಾರ್ ಅವರು ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಜನವರಿ 8 ರಂದು ಹಾನಗಲ್ ತಾಲೂಕಿನ ಖಾಸಗಿ ಲಾಡ್ಜ್ವೊಂದಕ್ಕೆ ನುಗ್ಗಿದ್ದ ಐದಾರು ಜನ ಯುವಕರ ತಂಡ, ಅಲ್ಲಿ ತಂಗಿದ್ದ ಜೋಡಿಯೊಂದರ ಮೇಲೆ ಹಲ್ಲೆ ಮಾಡಿತ್ತು. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ದೂರು ನೀಡಿದ್ದರು. ಅವರು ನೀಡಿದ ದೂರು ಆಧರಿಸಿ ಇದೀಗ ಎಫ್ಆರ್ಐ ಕೂಡ ದಾಖಲಾಗಿದೆ.