ಬೆಂಗಳೂರು:ತಾವು ರೈತ ನಾಯಕ ಎಂದು ಮುಖ್ಯಮಂತ್ರಿಯಾಗಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಇದೀಗ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ಬಸವರಾಜ ಹೊರಟ್ಟಿ ಪತ್ರ ಸಿಎಂಗೆ ಬಸವರಾಜ ಹೊರಟ್ಟಿ ಪತ್ರ ಸಿಎಂಗೆ ಬಸವರಾಜ ಹೊರಟ್ಟಿ ಪತ್ರ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಈಗಾಗಲೇ ರೈತರು ಸಾಲ, ಬೆಳೆ ನಾಶ, ಮಾರುಕಟ್ಟೆ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ರೈತರು ಜಮೀನನ್ನು ಮಾರಾಟ ಮಾಡಿ ಹಣಕ್ಕೆ ಆಕರ್ಷಿತರಾಗಿ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಹೀಗಾಗಿ ಕಾಯ್ದೆ ತಿದ್ದುಪಡಿ ನಿರ್ಧಾರ ಕೈಬಿಡಬೇಕು ಎಂದು ಕೇಳಿಕೊಂಡಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರುವ ಪ್ರಯತ್ನ ಮಾಡಬೇಡಿ. ಕೆಲ ಸಚಿವರು ಈ ಕಾಯ್ದೆಯಿಂದ ರೈತರಿಗಾಗುತ್ತಿರುವ ಕಿರುಕುಳ ತಪ್ಪಿಸಲೆಂದೇ ತಿದ್ದುಪಡಿ ತರುತ್ತಿದ್ದೇವೆ ಎನ್ನುತ್ತಾರೆ. ಐಟಿ-ಬಿಟಿಯವರು ಕೃಷಿ ಮಾಡುತ್ತಾರೆಂದು ಕೆಲವರು ಹೇಳುತ್ತಾರೆ. ಕೃಷಿ ಮಾಡುವುದು ಕಂಪ್ಯೂಟರ್‌ನಲ್ಲಿ ಮಾಡುವ ಕೆಲಸವಲ್ಲ. ಅಂತಹವರು ಕೃಷಿ ಮಾಡುವುದು ಪುಸ್ತಕ ಓದಿ ಅಡುಗೆ ಮಾಡಿದಂತೆ. ನಿಮ್ಮಂಥವರು ಮುಖ್ಯಮಂತ್ರಿಗಳಾಗಿರುವ ಸಂದರ್ಭದಲ್ಲಿ ಇಂತಹ ಕರಾಳ ಶಾಸನವನ್ನು ತರುವುದು ಅವಿವೇಕದ ಪರಮಾವಧಿ ಎಂದು ಹೇಳಿದ್ದಾರೆ.
ಉಳಿಮೆಗಾಗಿ ಗೇಣಿದಾರನಿಗೆ ನೀಡಿರುವ ಜಮೀನಿಗೆ ಅನ್ವಯವಾಗುವ ಹಲವಾರು ಕಾನೂನುಗಳನ್ನು ಒಂದುಗೂಡಿಸಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಅದರಲ್ಲಿ ಸ್ವತಃ ಯಾರು ದುಡಿಮೆ ಮಾಡುತ್ತಾರೋ ಅವರಿಗೆ ರಕ್ಷಣೆ ಕೊಡುವಂತಹದು ಕಾನೂನಿನಲ್ಲಿತ್ತು. ಉಳಿಮೆ ಮಾಡದೇ ಕೇವಲ ಕಂದಾಯ ದಾಖಲೆಗಳಲ್ಲಿ ಜಮೀನಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಂಡು ಉಳಿಮೆ ಮಾಡುವವರಿಗೆ ಆ ಜಮೀನನ್ನು ಮಂಜೂರು ಮಾಡಲಾಗುತ್ತಿತ್ತು. ಆದರೆ ಇದರಿಂದ ಐಟಿ-ಬಿಟಿ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಲಾಭವಾಗುತ್ತದೆ ಎಂದು ವಿವರಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನೀವು ಕೂಡ ಉದ್ದಿಮೆದಾರರ ಕೈ ಗೊಂಬೆಯಾಗಿ ವರ್ತಿಸುತ್ತಿದ್ದೀರಿ ಎಂಬುದು ಇದರಿಂದ ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಆದ್ದರಿಂದ ತಕ್ಷಣ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ಅಧಿವೇಶನ ಬರುವವರೆಗೆ ನೀವು ಸುಗ್ರೀವಾಜ್ಞೆ ಹೊರಡಿಸಬಾರದು ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.