ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ಪತ್ರ ಬರೆದಿರುವ ಬಸವರಾಜ್ ಹೊರಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ "ಗ್ರೂಪ್ -ಸಿ" ಮತ್ತು "ಡಿ' ದರ್ಜೆಯ ನೌಕರರು ನನಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಆಯುಕ್ತಾಲಯ, ಉಪನಿರ್ದೇಶಕರ ಕಚೇರಿ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ದ್ವಿದಸ -ಸಹಿತ ಬೆರಳಚ್ಚುಗಾರರು, ಶೀಘ್ರಲಿಪಿಗಾರರು, ಗ್ರೂಪ್-ಡಿ ನೌಕರರು ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿ ಮತ್ತು ಶಾಲೆಗಳಲ್ಲಿ ಸತತವಾಗಿ ಒಂದೇ ಕಚೇರಿಯಲ್ಲಿ ಒಟ್ಟಾರೆ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಬೋಧಕೇತರ ನೌಕರರನ್ನು ವರ್ಗಾವಣೆ ಮಾಡುವ ಕುರಿತು ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಮಾಹಿತಿಗಳನ್ನು ಕೋರಿದ್ದೀರಿ ಎಂದು ನೆನಪಿಸಿದ್ದಾರೆ.
ಈ ವಿಷಯದ ಕುರಿತು ದಿನಪತ್ರಿಕೆಯಲ್ಲಿಯೂ ಸಹಿತ ವರದಿ ಪ್ರಕಟವಾಗಿರುತ್ತದೆ. ಸರ್ಕಾರಿ ಆದೇಶ 2013 ರ ಜೂ.07 ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ-2013ರ ಮಾರ್ಗಸೂಚಿ ಪ್ರಕಾರ ಪ್ರತಿ ವರ್ಷ ಮೇ ಮತ್ತು ಜೂನ ತಿಂಗಳಲ್ಲಿ ವರ್ಗಾವಣೆ ಮಾಡಲು ಅವಕಾಶವಿರುತ್ತದೆ ಎಂದು ತಿಳಿಸಿದೆ.