ಬೆಂಗಳೂರು:ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರ ಮತ್ತು ಕರ್ನಾಟಕ ಪಶ್ಚಿಮ ಮತಕ್ಷೇತ್ರಗಳ ಚುನಾವಣೆಯ ಫಲಿತಾಶ ಪ್ರಕಟಗೊಂಡಿದ್ದು, ಈ ಎರಡು ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತಲಾ ಒಂದು ಸ್ಥಾನ ಗಳಿಸಿವೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದು, ಅದೇ ರೀತಿ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ್ ಹುಕ್ಕೇರಿ ಅವರು ಗೆಲುವು ಸಾಧಿಸಿದ್ದಾರೆ.
ವಾಯವ್ಯ ಶಿಕ್ಷಕರ ಮತಕ್ಷೇತ್ರದ ವಿವರ: ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ ಹುಕ್ಕೇರಿ 11,460 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ 6,405 ಮತಗಳನ್ನು ಪಡೆದುಕೊಂಡಿದ್ದಾರೆ. ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 21,402 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 1,270 ಮತಗಳು ಅಸಿಂಧುವಾಗಿವೆ ಮತ್ತು 20,132 ಮತಗಳು ಸಿಂಧುವಾಗಿತ್ತು. ಅಭ್ಯರ್ಥಿ ಗೆಲುವಿಗೆ 10,067 ಮತಗಳ ಕೋಟಾ ನಿಗದಿಪಡಿಸಲಾಗಿತ್ತು.
ಅಭ್ಯರ್ಥಿಗಳು ಪಡೆದ ಮತಗಳ ವಿವರ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪ್ರಕಾಶ ಹುಕ್ಕೇರಿ 11,460 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅರುಣ ಶಹಾಪೂರ ಅವರು 6,405 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಲೋಣಿ 544 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಪ್ಪಾಸಾಹೇಬ ಕುರಣೆ- 9, ಚಂದ್ರಶೇಖರ ಗುಡಸೆ- 101, ದೇಸಾಯಿ ಜಯಪಾಲ ರಾಜಾರಾಮ- 10, ಬನ್ನೂರು ಎನ್.ಬಿ -1009, ಬಸಪ್ಪ ಮಣಿಗಾರ -39, ಶ್ರೀಕಾಂತ ಪಾಟೀಲ- 19, ಶ್ರೀನಿವಾಸಗೌಡ ಗೌಡರ- 524, ಶ್ರೇನಿಕ್ ಅಣ್ಣಾಸಾಹೇಬ್ ಜಂಗಟೆ -8 ಹಾಗೂ ಚಿಕ್ಕನಾರಗುಂದ ಸಂಗಮೇಶ- 4 ಮತಗಳನ್ನು ಪಡೆದಿದ್ದಾರೆ.