ಬೆಂಗಳೂರು: ಕನ್ನಡ ರಾಜ್ಯೋತ್ಸವದಂದೇ ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕೆಂಬುದು ನಮ್ಮ ಇಚ್ಛೆ ಆಗಿತ್ತು. ಅದರಂತೆ ಇಂದೇ ಪ್ರಶಸ್ತಿ ಪ್ರದಾನಿಸುತ್ತಿದ್ದೇವೆ. ಅವರ ಕುರಿತ ವಿಷಯವನ್ನು ಪಠ್ಯದಲ್ಲಿ ಸೇರಿಸುವ ಕುರಿತು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್‌ಟಿ ನಗರ ನಿವಾಸದಲ್ಲಿ ಮಾತನಾಡಿದ ಅವರು, ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದರು. ಅತ್ಯಂತ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಇದು ಕೇವಲ ಆಚರಣೆಯಾಗಿ ಉಳಿಯೋದಿಲ್ಲ, ಬದುಕಿನ ಪ್ರತೀ ಕ್ಷಣದಲ್ಲೂ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಶಿಕ್ಷಣ, ಉದ್ಯೋಗ, ಎಲ್ಲ ರಂಗಗಳಲ್ಲೂ ರಾಜ್ಯ ಮುಂದೆ ಬರಲು ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅದರ ಹೆಚ್ಚಿನ ಲಾಭವನ್ನು ಕನ್ನಡಿಗರು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇವತ್ತಿನ ಕರ್ನಾಟಕ ರಾಜ್ಯೋತ್ಸವದ ವಿಶೇಷವೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಿರುವುದು. ನವೆಂಬರ್ 1 ರಂದು ಅವರಿಗೆ ಪ್ರಶಸ್ತಿ ಕೊಡಬೇಕೆಂಬುದು ನಮ್ಮ ಇಚ್ಛೆ ಆಗಿತ್ತು. ಅವರು, ಕನ್ನಡದ ನೆಲದಲ್ಲಿ ಹತ್ತು ಹಲವು ಪರೋಪಕಾರ ಕೆಲಸವನ್ನು ಮಾಡಿದಾರೆ. ಎಷ್ಟರ ಮಟ್ಟಿಗೆ ಅಂದರೆ ತಮ್ಮ ಅಂಗಾಂಗಗಳ ದಾನ ಮಾಡಿ ಮಾದರಿಯಾಗಿದ್ದಾರೆ. ಅವರು ತೀರಿ ಹೋದ ಮೇಲೆ ಹಲವರು ಕಣ್ಣು ದಾನ ಮಾಡುತ್ತಿದಾರೆ. ಪುನೀತ್ ಸಣ್ಣ ವಯಸ್ಸಲ್ಲೇ ಪ್ರೇರಣಾದಾಯಕ ಸಾಧನೆ ಮಾಡಿದರು ಎಂದು ಗುಣಗಾನ ಮಾಡಿದರು.