ಬೆಂಗಳೂರು:ಕೊರೊನಾ ಸೋಂಕಿತರಿಗೆ ಎದುರಾಗುತ್ತಿರುವ ಹಾಸಿಗೆಗಳ ಅಭಾವ ನೀಗಿಸಲು ಈಗಾಗಲೇ 1,200 ಹಾಸಿಗೆಗಳ ಸ್ಟೆಪ್ಡೌನ್ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಖಾಸಗಿ ಆಸ್ಪತ್ರೆಗಳ ಸಂಘ, ಹೋಟೆಲ್ ಉದ್ಯಮಿಗಳ ಒಕ್ಕೂಟ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ವರ್ಚುವಲ್ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ ಸೌಲಭ್ಯ ಕಲ್ಪಿಸಲು ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಹೋಟೆಲ್‌ಗಳಲ್ಲಿ ಸ್ಟೆಪ್ಡೌನ್ ಆಸ್ಪತ್ರೆಗಳನ್ನು ತ್ವರಿತವಾಗಿ ತೆಗೆಯಲು ಕ್ರಮವಹಿಸಬೇಕು. ಎಲ್ಲೆಲ್ಲಿ ಸ್ಟೆಪ್ಡೌನ್ ಆಸ್ಪತ್ರೆಗಳನ್ನು ತೆಗೆಯಬೇಕು ಎಂಬುದನ್ನು ಗುರುತಿಸಿ ಹಂತ- ಹಂತವಾಗಿ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಿಕೊಂಡು ಹೋಗಲು ಅಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ಆಯುಕ್ತ(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯ ಆಯುಕ್ತರು ಗೌರವ್ ಗುಪ್ತ ಮಾತನಾಡಿ, ಕೆಪಿಎಂಇ ಅಡಿ ನೋಂದಣಿ ಆಗಿರುವ ಖಾಸಗಿ ಆಸ್ಪತ್ರೆಗಳ ಜೊತೆ ಹೋಟೆಲ್ಗಳು ಟೈ-ಅಪ್ ಮಾಡಿಕೊಂಡು ಸ್ಟೆಪ್ಡೌನ್ ಆಸ್ಪತ್ರೆಗಳನ್ನು ತೆರೆಯಬಹುದಾಗಿದೆ. ಈ ಸಂಬಂಧ ಈಗಿರುವ ಹಾಸಿಗೆಗಳ ಸಂಖ್ಯೆ ತ್ವರಿತವಾಗಿ ಹೆಚ್ಚಿಸುವ ಮೂಲಕ ಸ್ವಲ್ಪ ಗುಣಮುಖರಾದವರನ್ನು ಸ್ಟೆಪ್ಡೌನ್ ಆಸ್ಪತ್ರೆಗಳಿಗೆ ವರ್ಗಾಯಿಸಿ, ತ್ವರಿತವಾಗಿ ಚಿಕಿತ್ಸೆ ಅವಶ್ಯಕತೆ ಇರುವವರನ್ನು ಆಸ್ಪತ್ರೆಗಳಲ್ಲಿ ದಾಖಲಿಸಿ ಜೀವ ಉಳಿಸಬಹುದಾಗಿದೆ ಎಂದರು.
ಸ್ಟೆಪ್ಡೌನ್ ಆಸ್ಪತ್ರೆಗಳನ್ನು ಪ್ರಾರಂಭಿಸುವ ಸಲುವಾಗಿ ತ್ವರಿತವಾಗಿ ಹೋಟಲ್‌ಗಳನ್ನು ಗುರುತಿಸಿ ಆಸ್ಪತ್ರೆಗಳ ಜೊತೆ ಟೈ-ಅಪ್ ಮಾಡಿಕೊಂಡು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮವಹಿಸುವಂತೆ ಫನಾ ಹಾಗೂ ಹೋಟೆಲ್ ಅಸೋಶಿಯೇಷನ್ ಪದಾಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳಿಗೆ ವೈದ್ಯರು, ಅರೆವೈದ್ಯಕೀಯ ಹಾಗೂ ನರ್ಸ್ಗಳ ಅವಶ್ಯಕತೆಯಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಅವಶ್ಯಕ ಸಿಬ್ಬಂದಿ ನೀಡಲಿದೆ. ಇದಲ್ಲದೆ ನಿವೃತ್ತ ವೈದ್ಯರು ಹಾಗೂ ವಿಜ್ಞಾನ ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಅವಶ್ಯಕವಿರುವ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಕೂಡಲೇ ಸ್ಟೆಪ್ಡೌನ್ ಆಸ್ಪತ್ರೆಗಳನ್ನು ತೆರೆಯಲು ಕ್ರಮವಹಿಸಬೇಕು. ಜೊತೆಗೆ ಸ್ಟೆಪ್ಡೌನ್ ಆಸ್ಪತ್ರೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಹೋಟಲ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ಈಗಾಗಲೇ ನಗರದ 13 ಆಸ್ಪತ್ರೆಗಳ ಸಹಯೋಗದಲ್ಲಿ ಹೋಟಲ್‌ಗಳಲ್ಲಿ ಸ್ಟೆಪ್ಡೌನ್ ಆಸ್ಪತ್ರೆಗಳನ್ನು ಮಾಡಿದ್ದು, 1,200 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ 15 ಹೋಟಲ್‌ಗಳನ್ನು ಸ್ಟೆಪ್ಡೌನ್ ಆಸ್ಪತ್ರೆ ಮಾಡಲು ಗುರುತಿಸಿದ್ದು, 1,000 ಹಾಸಿಗೆಗಳ ವ್ಯವಸ್ಥೆಯಿದೆ. ಕೂಡಲೆ ಆಸ್ಪತ್ರೆಗಳ ಜೊತೆ ಟೈ-ಅಪ್ ಆಗಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುವುದು ಎಂದರು.
ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿ, ಕೂಡಲೆ ಆಸ್ಪತ್ರೆಗಳ ಜೊತೆ ಟೈ ಅಪ್ ಮಾಡಿಕೊಂಡು 2,000 ಹಾಸಿಗೆಗಳ ವ್ಯಸಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು. ಜೊತೆಗೆ ಸ್ಟೆಪ್ ಡೌನ್ ಆಸ್ಪತ್ರೆಗಳ ಮೇಲ್ವಿಚಾರಣೆಗೆ ಅಧಿಕಾರಿಯನ್ನು ನಿಯೋಜನೆ ಮಾಡಲು ಮುಖ್ಯ ಆಯುಕ್ತರಿಗೆ ತಿಳಿಸಿದರು.