ಬೆಂಗಳೂರು: ಇವರು ಮೂವತ್ತು ರೂಪಾಯಿ ಕೊಟ್ಟರೆ ಜನರಿಗೆ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಹತ್ತು ಕೆ.ಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಅಕ್ಕಿ ಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇವರು ಕೊಡುವ ಹಣಕ್ಕೆ ಮಾರುಕಟ್ಟೆಯಲ್ಲಿ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ ಎಂದರು.
ಕಾಂಗ್ರೆಸ್ನವರು ಚುನಾವಣೆ ಸಂದರ್ಭದಲ್ಲಿ ಹತ್ತು ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಐದು ಕೆ.ಜಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಮಾತಿಗೆ ತಪ್ಪುತ್ತಿದ್ದಾರೆ. ಎಷ್ಟಾದರೂ ಆಗಲಿ ನಾವು ಅಕ್ಕಿಯನ್ನೇ ಕೊಡುತ್ತೇವೆ ಅಂತ ಹೇಳಿದ್ದರು. ಈಗ ಹಣ ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ. ಇವರು ಮತ್ತೆ ಮಾತು ತಪ್ಪಿದ್ದಾರೆ ಎಂದು ಆರೋಪಿಸಿದರು. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಅಕ್ಕಿಗೆ ಐವತ್ತರಿಂದ ಆರವತ್ತು ರೂಪಾಯಿ ಬೆಲೆ ಇದೆ ಎಂದು ಹೇಳಿದರು.
ಕರೆಂಟ್ ವಿಚಾರದಲ್ಲಿಯೂ ಕಂಡಿಷನ್ ಹಾಕಿ ಅದನ್ನೇ ಮಾಡಿದ್ದಾರೆ. ಹತ್ತು ಕೆ.ಜಿ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಸೆಂಬರ್ವರೆಗೂ ಕೊಟ್ಟಿದೆ. ಎಷ್ಟೇ ಖರ್ಚಾದರೂ ಅಕ್ಕಿ ಕೊಡುವುದಾಗಿ ಹೇಳಿದವರು ಈಗ ಮಾತಿಗೆ ತಪ್ಪಿ ಜನರಿಗೆ ಎರಡೂವರೆ ಕೆಜಿ ಮಾತ್ರ ದೊರೆಯುವಂತೆ ಮಾಡಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.