ಬೆಂಗಳೂರು: ನನ್ನ ನಾಮಪತ್ರ ತಿರಸ್ಕಾರಕ್ಕೆ ಬಿಜೆಪಿ, ಸಿಎಂ ಕಚೇರಿ ಹಾಗೂ ಬಿಜೆಪಿ ಕಾನೂನು ಘಟಕ ಷಡ್ಯಂತ್ರ ರೂಪಿಸಿದ್ದವು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರ ನಾಮಪತ್ರ ಸ್ವೀಕಾರವಾಗಿರುವುದೇ ಈ ಆರೋಪಕ್ಕೆ ಉತ್ತರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.
ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ತಿರಸ್ಕಾರ ಮಾಡಿಸಲು ಷಡ್ಯಂತ್ರ ಮಾಡಲಾಗಿತ್ತು ಎಂದು ನಮ್ಮ ಮೇಲೆ ಡಿ ಕೆ ಶಿವಕುಮಾರ್ ಆರೋಪ ಮಾಡುತ್ತಿದ್ದಾರೆ. ಆದರೆ, ಈವರೆಗೂ ಯಾರದ್ದೂ ನಾಮಪತ್ರ ತಿರಸ್ಕೃತವಾಗಿಲ್ಲ. ಅದೇ ಸಾಕ್ಷಿ. ನಿನ್ನೆಯೇ ಎಲ್ಲಾ ಮುಗಿದು ಹೋಗಿದೆ. ಅವರಿಗೆ ಬೇರೆ ವಿಷಯ ಇಲ್ಲ, ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.
ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಸೇರಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನ ಮುಗಿಸ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯನವರನ್ನ ಹೇಗೆ ಮುಗಿಸಿದ್ದಾರೆ ಅಂತ ಗೊತ್ತಿಲ್ವಾ?, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮುಗಿಸಿದ್ದರು. ಈ ಬಾರಿ ವರುಣಾದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಅನ್ನೋದು ಜಗ್ಗತ್ತಿಗೆ ಗೊತ್ತಿದೆ. ಹಾಗಾಗಿ, ಈ ರೀತಿಯ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಲಿಂಗಾಯತ ಡ್ಯಾಮ್ ಒಡೆದು ಹರಿದು ಕಾಂಗ್ರೆಸ್ಗೆ ಬರುತ್ತಿದೆ ಎನ್ನುವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ. ಮೊದಲು ಅದನ್ನ ನೋಡಿಕೊಳ್ಳಲಿ, ಕಾಂಗ್ರೆಸ್ ಸರ್ಕಾರದ ವೇಳೆ ವೀರಶೈವ ಲಿಂಗಾಯತ ಧರ್ಮ ವಿಭಜನೆಗೆ ಯತ್ನಿಸಲಾಗಿತ್ತಾದರೂ ಅಂದು ಲಿಂಗಾಯತ ಸಮುದಾಯ ವಿಭಜನೆ ಆಗಿಲ್ಲ. ಲಿಂಗಾಯತ ಮತದಾರರು ಯಾವಾಗಲು ಪ್ರಬದ್ಧರಾಗಿದ್ದಾರೆ. ಡಿಕೆಶಿ ಹೇಳಿಕೆ ನಂತರ ಲಿಂಗಾಯತರು ಬಹಳ ಜಾಗೃತರಾಗಿ ಮತ್ತಷ್ಟು ಗಟ್ಟಿಯಾಗಿದ್ದಾರೆ. ಗಟ್ಟಿ ಮಾಡುವ ಕೆಲಸ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಹೇಳಿದರು.