ಬೆಂಗಳೂರು: ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ನಡೆಯಲು ಅವಕಾಶ ಕೊಟ್ಟಿಲ್ಲ, ಇನ್ನು ಮುಂದೆಯೂ ಅವಕಾಶ ಮಾಡಿಕೊಡುವುದಿಲ್ಲ. ರಾಷ್ಟ್ರೀಯ ಭದ್ರತಾ ದಳದ ಸಹಕಾರದೊಂದಿಗೆ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಕೇರಳದಲ್ಲಿ ಹೆಚ್ಚಾಗಿ ಐಸಿಸ್ ಉಗ್ರ ಸಂಘಟನೆ ಸಕ್ರಿಯವಾಗಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ನಮ್ಮ ಗಮನಕ್ಕೆ ಬಂದಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಎಟಿಎಸ್ ತಂಡದ ಜೊತೆ ಸೇರಿಕೊಂಡು ಕಾರ್ಯಾಚರಣೆ ಮಾಡುತ್ತೇವೆ ಎಂದು ಈಗಾಗಲೇ ತಮಿಳುನಾಡು ಮತ್ತು ಕೇರಳ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಈ ಕುರಿತು ಮಾಧ್ಯಮಗಳ ಮುಂದೆ ಎಲ್ಲಾ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರು.
ಕೇರಳ ಮತ್ತು ತಮಿಳುನಾಡು ಬೆಂಗಳೂರು ಸಮೀಪದಲ್ಲಿರುವುದರಿಂದ ಮೂರು ರಾಜ್ಯಗಳು ಸೇರಿ ಕಾರ್ಯಾಚರಣೆ ಮಾಡುತ್ತೇವೆ. ಇದುವರೆಗೆ ಉಗ್ರರು ಏನೇ ಪ್ರಯತ್ನಪಟ್ಟರೂ ಸಹ ಯಾವುದೇ ಚಟುವಟಿಕೆಗೆ ಅವಕಾಶ ಕೊಟ್ಟಿಲ್ಲ. ನಿರಂತರವಾಗಿ ನಾವು ಉಗ್ರ ಚಟುವಟಿಕೆಗಳನ್ನು ತಡೆಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ನಾಳೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ಮಾಡುತ್ತಿದ್ದಾರೆ. ಪ್ರತಿಯೊಂದು ರಾಜ್ಯದ ಜೊತೆ ಪ್ರತ್ಯೇಕವಾಗಿ ಮಾತನಾಡುತ್ತಾರೆ. ನಮಗೂ ಅವಕಾಶ ಸಿಕ್ಕರೆ ನಾವು ಭಾಗವಹಿಸುತ್ತೇವೆ ಎಂದರು.
ಭಾನುವಾರದ ಲಾಕ್ಡೌನ್ ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ. ತಜ್ಞರ ಸಮಿತಿ ಜೊತೆ ಚರ್ಚಿಸಿ ನಂತರ ತೀರ್ಮಾನಿಸಲಿದ್ದಾರೆ. ಮುಂದಿನ ಭಾನುವಾರ ಲಾಕ್ ಡೌನ್ ಮುಂದುವರಿಸಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಸಿಎಂ ನಿರ್ಧರಿಸುತ್ತಾರೆ ಎಂದು ಗೃಹ ಸಚಿವರು ತಿಳಿಸಿದರು.