ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ಸತ್ಯ ಇಡೀ ಜಗತ್ತಿಗೆ ಗೊತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಧರ್ಮ ವಿಭಜನೆಗೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಸಿದ್ದರಾಮಯ್ಯ ಮತ್ತು ಸ್ವಾಮೀಜಿಗಳ ನಡುವೆ ನಡೆದ ಸಂಭಾಷಣೆ ಅದು. ಅದರ ಬಗ್ಗೆ ನಾನು ಮಾತನಾಡಲ್ಲ. ಆ ಸತ್ಯ ಏನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಗುರುಗಳು ನಿನ್ನೆ ಒಂದು ಹೇಳಿದ್ರು, ಇವತ್ತು ಒಂದು ಹೇಳಿದ್ರು. ಅವರಿಬ್ಬರ ಮಧ್ಯೆ ಏನು ಸಂಭಾಷಣೆ ನಡೆದಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದರು.
ದೇವರಾಜ ಅರಸು ಪ್ರತಿಮೆಗೆ ಪುಷ್ಪನಮನ: ದೇವರಾಜ ಅರಸು 107ನೇ ಜನ್ಮ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಪಶ್ವಿಮ ದ್ವಾರ ಬಳಿ ಇರುವ ದೇವರಾಜ ಅರಸು ಪುತ್ಥಳಿಗೆ ಸಿಎಂ ಬೊಮ್ಮಾಯಿ ಮಾಲಾರ್ಪಣೆ ಮಾಡಿದರು. ಈ ವೇಳೆ, ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕುಮಾರ ಬಂಗಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಇವತ್ತು ಕರ್ನಾಟಕ ಕಂಡಂತಹ ಧೀಮಂತ ನಾಯಕ, ಹಿಂದುಳಿದವರ ನಾಯಕ ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಯಾಗಿದೆ. ಅವರು ತಮ್ಮದೇ ಆದಂತಹ ಒಂದು ಸೇವೆ ಮಾಡಿ ಜನಮನ ಗೆದ್ದಿದ್ದಾರೆ. ಅವರಿಗೆ ಬಡವರ ಬಗ್ಗೆ ಕಳಕಳಿ ಇತ್ತು. ಹಿಂದುಳಿದವರ ನಾಯಕ ಅವರಾಗಿದ್ದರು. ಹಿಂದುಳಿದ ವರ್ಗದವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇವೆ ಮಾಡಿದವರು. ಭೂ ಸುಧಾರಣೆ ಬಗ್ಗೆ ಅತೀ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಅವರಗಿದೆ ಎಂದು ವಿವರಿಸಿದರು.