ಬೆಂಗಳೂರು:ಯಶಸ್ವಿನಿ ಯೋಜನೆಯನ್ನು ಅಕ್ಟೋಬರ್ 2 ರಂದು ಉದ್ಘಾಟನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 2022- 23ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲಿಸಿದರು.
ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಸಂಬಂಧಿಸಿದಂತೆ ಆರ್ಬಿಐ ನಿಯಮಾವಳಿಗಳ ಅಗತ್ಯಗಳಿಗೆ ಅನುಸಾರವಾಗಿ ದಾಖಲೆಗಳನ್ನು ಸಲ್ಲಿಸಬೇಕು. ಈ ತಿಂಗಳೊಳಗೆ ಕೆಲಸ ಪೂರ್ಣಗೊಳ್ಳಬೇಕು ಎಂದು ಸಿಎಂ ಸೂಚಿಸಿದರು. ಯಶಸ್ವಿನಿ ಯೋಜನೆ ಹಾಗೂ ಎಬಿಆರ್ಕೆ ಡ್ಯೂಪ್ಲಿಕೇಷನ್ ಆಗಬಾರದು. ಎಬಿಆರ್ಕೆ ಅರ್ಜಿಗಳನ್ನು ತಿರಸ್ಕರಿಸಕೂಡದು. ತಜ್ಞರಿಂದ ಅಧ್ಯಯನ ಕೈಗೊಂಡು ತೀರ್ಮಾನ ಕೈಗೊಳ್ಳಬೇಕು. ಗೋಕಾಕ್, ಬೀದರ್, ಹುಬ್ಬಳ್ಳಿಯಲ್ಲಿ ಸಹಕಾರಿ ವಲಯದ ಆಸ್ಪತ್ರೆಗಳನ್ನು ಬಲಪಡಿಸಲು ಆಸ್ಪತ್ರೆಗಳಿಗೆ ನೆರವು ಒದಗಿಸಲು ಕ್ರಮ ವಹಿಸಬೇಕು.
ಯಶಸ್ವಿನಿ ಯೋಜನೆ ಅ.2 ರಂದು ಉದ್ಘಾಟನೆ: ಬೊಮ್ಮಾಯಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜೊತೆ ಸಭೆ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ ಜುಲೈ ತಿಂಗಳೊಳಗಾಗಿ ಫಲಾನುಭವಿಗಳ ಆಯ್ಕೆಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 2022-23ರ ಆಯವ್ಯಯ ಘೋಷಣೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ, ಇಲಾಖೆಯ 50 ಕನಕದಾಸ ವಿದ್ಯಾರ್ಥಿನಿಲಯಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗಳ ಕಾರ್ಯವನ್ನು ಪ್ರಾರಂಭಿಸಬೇಕು ಎಂದರು.
ಈ ವರ್ಷ ಜುಲೈಯೊಳಗೆ ಫಲಾನುಭವಿಗಳ ಆಯ್ಕೆ ಮುಗಿಯಬೇಕು. ವಿದ್ಯಾರ್ಥಿನಿಲಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಮಾಸಿಕ ಭೋಜನಾ ವೆಚ್ಚವನ್ನು ಹೆಚ್ಚಿಸಲಾಗಿದ್ದು, ಆ ಬಗ್ಗೆ ಗಮನ ಹರಿಸಬೇಕು ಎಂದರು. ನಾರಾಯಣ ಗುರು ವಸತಿ ಶಾಲೆ ಸ್ಥಾಪನೆಗೆ ಸ್ಥಳ ನಿಗದಿಯಾಗಿದೆ. ಮೊದಲ ಹಂತದಲ್ಲಿ 5 ಕೋಟಿ ರೂ.ಗಳಿಗೆ ಶಾಲೆಯನ್ನು ಪ್ರಾರಂಭ ಮಾಡಬೇಕು, ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಅನುದಾನ ಲಭ್ಯವಿದ್ದು, ಇದನ್ನು 100 ಕೋಟಿ ರೂ. ನೀಡುವುದು, ವೀರಶೈವ ಅಭಿವೃದ್ಧಿ ನಿಗಮಕ್ಕೆ ಲಭ್ಯವಿರುವ 100 ಕೋಟಿ ರೂ.ಗಳು ವೆಚ್ಚವಾದ ನಂತರ ಹೆಚ್ಚುವರಿ 100 ಕೋಟಿ ಗಳನ್ನು ಒದಗಿಸುವುದು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧಿಸಿದಂತೆ ತುರ್ತಾಗಿ ಸಭೆ ಕರೆಯುವಂತೆ ಸೂಚಿಸಿದರು.
ಇದನ್ನೂ ಓದಿ:ಸಾವಿರ ಕೋಟಿ ವೆಚ್ಚದಲ್ಲಿ 6,500 ಶಾಲಾ ಕೊಠಡಿಗಳ ನಿರ್ಮಾಣ: ಸಿಎಂ ಬೊಮ್ಮಾಯಿ
ದೇವರಾಜ ಅರಸು ಹಿಂದುಳಿದ ವರ್ಗಗಳ ಹಿಂದುಳಿದ ನಿಗಮದ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಶೇ 85ರಷ್ಟು ಪ್ರವರ್ಗ 1 ಮತ್ತು 2ಎಗೆ ವರ್ಗೀಕರಿಸಿ ಬರುವ ಸಮುದಾಯಗಳ ಪಟ್ಟಿಯನ್ನು ಕಡತದಲ್ಲಿ ಸಲ್ಲಿಸುವಂತೆ ತಿಳಿಸಿದ ಸಿಎಂ, ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ 10 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ನೀಡಬೇಕು.
ಅಮೃತ ಮುನ್ನಡೆ ನೂತನ ಯೋಜನೆಗೆ ಮುಂದಿನ ವಾರದಿಂದ ಅರ್ಜಿ ಕರೆಯುವುದು . ಪದವಿ ಕೋರ್ಸುಗಳ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಬೇಕು, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಿಂದ 50,000 ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕುರಿತು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ, ಉನ್ನತ ಶಿಕ್ಷಣ ಇಲಾಖೆಗಳ ಸಭೆ ಕರೆದು, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಸಂಖ್ಯೆಯನ್ನು ನಿಗದಿಪಡಿಸುವಂತೆ ಸೂಚಿಸಿದರು.