ಬೆಂಗಳೂರು: ಹಾಲಿನ ದರ ಏರಿಕೆಯಿಂದ ರೈತರಿಗೂ ಸಮಸ್ಯೆಯಾಗಬಾರದು, ಗ್ರಾಹಕರಿಗೂ ತೊಂದರೆಯಾಗಬಾರದು. ಕೆಎಂಎಫ್ಗೆ ದರ ಬಗ್ಗೆ ಒಂದು ಸೂತ್ರ ರೂಪಿಸಲು ಸೂಚಿಸಿದ್ದು, ಅದರ ಆಧಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಹಾಲಿನ ದರ ಏರಿಕೆ ಸಂಬಂಧ ಕೆಎಂಎಫ್ ಹಾಗೂ ಪಶು ಸಂಗೋಪನೆ ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹಾಲಿನ ದರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಯಾವ್ಯಾವ ರಾಜ್ಯದಲ್ಲಿ ಎಷ್ಟು ದರ ಇದೆ ಎಂಬ ಮಾಹಿತಿ ಕೇಳಿದ್ದೇವೆ. ಕೆಎಂಎಫ್ ಸರ್ಕಾರದ ಅಂಗ. ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯ. ಕೆಎಂಎಫ್ ಆಡಳಿತ ಮಂಡಳಿಗೆ ಕೆಲವು ಸಲಹೆ ಸೂಚನೆಗಳನ್ನು ಕೊಟ್ಟಿದ್ದೇನೆ. ಯಾವ ಕಾರಣಕ್ಕೆ ಏರಿಕೆ ಮಾಡಬೇಕು ಎಂದು ಮಾಹಿತಿ ಪಡೆದಿದ್ದೇನೆ ಎಂದರು.
ಕೆಎಂಎಫ್ನವರು ಕೆಲ ಮಾಹಿತಿಗಳನ್ನು ತಂದಿರಲಿಲ್ಲ, ಅದನ್ನು ಕೇಳಿದ್ದೇನೆ. ಸೋರಿಕೆ ತಡೆಗಟ್ಟಲು ಕೂಡಾ ಮಾರ್ಗದರ್ಶನ ಕೊಟ್ಟಿದ್ದೇನೆ. ಈಗಾಗಲೇ ಮಾಡಿರುವ 3 ರೂ. ದರ ಹೆಚ್ಚಳ ಬೇಡ ಎಂದು ಸೂಚಿಸಿದ್ದೇನೆ. ಪ್ರೋತ್ಸಾಹ ಧನ ಕೊಡುತ್ತಿರುವ ಕಾರಣ ಮತ್ತು ರೈತರ ಹಿತಚಿಂತನೆ ಕಾರಣಕ್ಕೆ ಸರ್ಕಾರ ಕೆಎಂಎಫ್ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ.
ಹಾಲಿನ ದರ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಬೆಲೆ ಏರಿಕೆ ಸಂಬಂಧ ಕೆಎಂಎಫ್ ಮಂಡಳಿ ಸಭೆಯಲ್ಲಿ ಒಂದು ಸೂತ್ರ ರೂಪಿಸುವಂತೆ ಸೂಚನೆ ನೀಡಿದ್ದೇನೆ. ಅದನ್ನು ನೋಡಿಕೊಂಡು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.