ಬೆಂಗಳೂರು: ಡಿಸೆಂಬರ್ 19 ರಿಂದ ಹತ್ತು ದಿನಗಳ ಕಾಲ ಬೆಳಗಾವಿ ಅಧಿವೇಶನ ನಡೆಯಲಿದೆ. ಪ್ರಸ್ತುತ ಬೊಮ್ಮಾಯಿ ಸರ್ಕಾರದ ಕೊನೆಯ ಅಧಿವೇಶನ ಆಗಲಿದೆ. ಚುನಾವಣೆ ಹೊಸ್ತಿಲಲ್ಲಿ ನಡೆಯುವ ಈ ಚಳಿಗಾಲದ ಅಧಿವೇಶನದಲ್ಲಿ ಬೊಮ್ಮಾಯಿ ಸರ್ಕಾರ ಚುನಾವಣಾ ಲೆಕ್ಕಾಚಾರದ ಮೇಲೆ ಕಣ್ಣಿಟ್ಟಿದೆ.
ಬೆಳಗಾವಿ ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದೆ. ಡಿ.19 ರಿಂದ ಡಿ.30ರ ವರೆಗೆ ನಡೆಯಲಿರುವ 10 ದಿನಗಳ ಚಳಿಗಾಲದ ಅಧಿವೇಶನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ. ಬೊಮ್ಮಾಯಿ ಸರ್ಕಾರಕ್ಕೆ ಇದು ಕೊನೆಯ ಚಳಿಗಾಲದ ಹಾಗೂ ಬೆಳಗಾವಿಯ ಅಧಿವೇಶನವಾಗಲಿದೆ. ಚುನಾವಣಾ ಹೊಸ್ತಿಲಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ನೀಡುವ ಬೆಳಗಾವಿ ಅಧಿವೇಶನ ಬೊಮ್ಮಾಯಿ ಸರ್ಕಾರಕ್ಕೆ ಮಹತ್ವದ್ದಾಗಿದೆ. ಹೀಗಾಗಿ ಚುನಾವಣೆ ಮೇಲೆ ಕಣ್ಣಿಟ್ಟು ಬೊಮ್ಮಾಯಿ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ.
ಪ್ರಮುಖವಾಗಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಕೇಂದ್ರೀಕರಿಸಿ ಬೆಳಗಾವಿ ಅಧಿವೇಶನದಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಲೆಕ್ಕಾಚಾರದೊಂದಿಗೆ ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ಘೋಷಣೆಗಳನ್ನು ಮಾಡುವ ಚಿಂತನೆ ಸರ್ಕಾರದ್ದಾಗಿದೆ.
ಸುವರ್ಣ ವಿಧಾನಸೌಧ ಆವರಣದಲ್ಲಿ ಪ್ರತಿಮೆ:ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ನಿರ್ಧರಿಸಿದ್ದಾರೆ. ಬೆಳಗಾವಿ ಅಧಿವೇಶನ ವೇಳೆ ಇಬ್ಬರು ಮಹಾನುಭಾವರ ಪ್ರತಿಮೆಗಳ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬ್ರಿಟಿಷರ ವಿರುದ್ಧದ ಮೊದಲ ಮಹಿಳಾ ಹೊರಾಟಗಾರ್ತಿ ಎಂಬ ಹೆಗ್ಗಳಿಕೆ ಗಳಿಸಿರುವ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿರ್ಮಿಸುವ ಮೂಲಕ ಬೊಮ್ಮಾಯಿ ಸರ್ಕಾರ ಕಿತ್ತೂರು ಕರ್ನಾಟಕದ ಜನರ ಒಲವು ಗಿಟ್ಟಿಸಿಕೊಳ್ಳಲು ಮುಂದಾಗಿದೆ.
ಇತ್ತ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನೂ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ನಿರ್ಮಿಸುವ ಮೂಲಕ ಬೊಮ್ಮಾಯಿ ಸರ್ಕಾರ ಸಮುದಾಯದ ಮತ ಬ್ಯಾಂಕ್ನತ್ತ ಕಣ್ಣಿಟ್ಟಿದೆ. ಎರಡು ಮಹಾನುಭಾವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಉತ್ತರ ಭಾಗದ ಜನರ ಪ್ರೀತಿಪಾತ್ರರಾಗುವ ಲೆಕ್ಕಾಚಾರ ಹೊಂದಿದೆ.
ಪಂಚಮಸಾಲಿ ಮೀಸಲಾತಿ ಬಗ್ಗೆ ಮಹತ್ವದ ಘೋಷಣೆ?:ಇತ್ತ ಪಂಚಮಸಾಲಿಗಳ 2A ಮೀಸಲಾತಿ ಹೋರಾಟದ ಬಗ್ಗೆ ಬೊಮ್ಮಾಯಿ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಪಂಚಮಸಾಲಿ ಸಮುದಾಯ ದೊಡ್ಡ ಪ್ರಮಾಣದಲ್ಲಿ ಮೀಸಲಾತಿ ಹೋರಾಟ ನಡೆಸುತ್ತಿದೆ. ಇದರ ಬಿಸಿ ಬಿಜೆಪಿ ಸರ್ಕಾರಕ್ಕೆ ತಟ್ಟಲು ಪ್ರಾರಂಭವಾಗಿದೆ. ಈ ಹೋರಾಟದಿಂದ ಬಿಜೆಪಿಗೆ ಚುನಾವಣಾ ಹಿನ್ನಡೆಯಾಗುವ ಆತಂಕ ಎದುರಾಗಿದೆ.