ಬೆಂಗಳೂರು:ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇದೀಗ ವರ್ಷದ ಸಂಭ್ರಮ. ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಸಿಎಂ ಬೊಮ್ಮಾಯಿ ನೂರೆಂಟು ಸವಾಲು-ಸಂಕಷ್ಟಗಳನ್ನೂ ಎದುರಿಸಬೇಕಾಯಿತು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೊಮ್ಮಾಯಿ ಸಿಎಂ ಪಟ್ಟ ಅಲಂಕರಿಸಿದರು. ಜನಪರ ಆಡಳಿತ ಘೋಷಣೆಯೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಬೊಮ್ಮಾಯಿ ಸರ್ಕಾರಕ್ಕೆ ಆಡಳಿತದ ಹಾದಿ ಹುಲ್ಲಿನ ಹಾಸಾಗಿರಲಿಲ್ಲ. ವರ್ಷದ ತಮ್ಮ ಆಡಳಿತದಲ್ಲಿ ಅನಿಶ್ಚಿತತೆ, ನೂರೆಂಟು ಸವಾಲುಗಳನ್ನು ಎದುರಿಸುವಂತಾಯಿತು. ಒಂದೆಡೆ ಆಡಳಿತಕ್ಕೆ ಚುರುಕು, ಇನ್ನೊಂದೆಡೆ ದಿಟ್ಟ ನಾಯಕತ್ವದೊಂದಿಗೆ ಭ್ರಷ್ಟಾಚಾರ ರಹಿತ ಆಡಳಿತ, ಮತ್ತೊಂದೆಡೆ ಜನಪರ ಯೋಜನೆಗಳೊಂದಿಗೆ ಚುನಾವಣೆ ವರ್ಷದಲ್ಲಿ ರಾಜ್ಯದ ಜನರಿಗೆ ಸನಿಹವಾಗುವ ಸವಾಲುಗಳೊಂದಿಗೆ ಬೊಮ್ಮಾಯಿ ಸರ್ಕಾರ ವರ್ಷದ ಹಾದಿ ಕ್ರಮಿಸಿದೆ.
ಒಗ್ಗಟ್ಟಿನೊಂದಿಗೆ ಆಡಳಿತ ನಡೆಸುವ ಅಗ್ನಿಪರೀಕ್ಷೆ:ಬೊಮ್ಮಾಯಿ ಸರ್ಕಾರಕ್ಕೆ ಯಡಿಯೂರಪ್ಪರಂತಹ ನಾಯಕನ ಸ್ಥಾನ ತುಂಬಿಸುವ ಸವಾಲಿನ ಜೊತೆಗೆ ಸಹದ್ಯೋಗಿಗಳನ್ನು ಒಟ್ಟಿಗೆ ಕೊಂಡೊಯ್ಯುವ ಅಗ್ನಿಪರೀಕ್ಷೆ ಎದುರಾಗಿತ್ತು. ಆಂತರಿಕ ವೈಮನಸ್ಸು, ಬಣಗಳನ್ನು ಒಟ್ಟಾಗಿ ಕೊಂಡೊಯ್ಯುವ ದೊಡ್ಡ ಸವಾಲಿನೊಂದಿಗೆ ಬೊಮ್ಮಾಯಿ ಆಡಳಿತ ನಡೆಸಿದರು.
ಬಣ, ಬಂಡಾಯ, ಅತೃಪ್ತಿಗಳನ್ನು ಶಮನಗೊಳಿಸಿ, ಎಲ್ಲರನ್ನೂ ಸಮಾಧಾನಪಡಿಸಿ ಒಗ್ಗಟ್ಟು ಪ್ರದರ್ಶಿಸುವುದರಲ್ಲಿ ಬೊಮ್ಮಾಯಿ ಸರ್ಕಾರ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಸಾರ್ವಜನಿಕವಾಗಿ ಯಾವೊಬ್ಬ ಬಿಜೆಪಿ ಸರ್ಕಾರದ ಕಾರ್ಯವೈಖರಿಯಾಗಲಿ, ಆಡಳಿತದ ಬಗ್ಗೆಯಾಗಲಿ ಶಾಸಕರು ಭಿನ್ನರಾಗ ಹಾಡಿಲ್ಲ. ಹೈಕಮಾಂಡ್ ಆರಿಸಿದ ಸಿಎಂ ಆಗಿರುವುದರಿಂದ ಭಿನ್ನರಾಗ ಹಾಡುವ ಧೈರ್ಯವೂ ಬಿಜೆಪಿ ಪಾಳೆಯದಲ್ಲಿ ಬರಲಿಲ್ಲ.
ಸಂಪುಟ ರಚನೆ ಸವಾಲು:ಸಿಎಂ ಪಟ್ಟ ಏರಿದ ಬೊಮ್ಮಾಯಿ ಮುಂದೆ ಇದ್ದ ಅತಿ ದೊಡ್ಡ ಸವಾಲು ನೂತನ ಸಂಪುಟ ರಚನೆ. ಆಕಾಂಕ್ಷಿಗಳ ಪಟ್ಟಿ ಹಿರಿದಾಗಿತ್ತು. ಆದರೆ, ಎಲ್ಲಾ ಜಾತಿ, ಪ್ರದೇಶವಾರು ಗಮನದಲ್ಲಿರಿಸಿ ಸಂಪುಟ ರಚನೆ ಮಾಡುವುದು ಅನಿವಾರ್ಯವಾಗಿತ್ತು. ಸುಗಮ ಸಂಪುಟ ರಚನೆಗಾಗಿ ಹೈಕಮಾಂಡ್ ಬಾಗಿಲು ತಟ್ಟಿದ ಬೊಮ್ಮಾಯಿ ಸರ್ಕಾರ, ಆಕಾಂಕ್ಷಿಗಳ ಬಂಡಾಯದ ಬಿಸಿಯನ್ನೂ ತಣ್ಣಗಾಗಿಸುವ ಮಹದಾದ ಸವಾಲು ಎದುರಿಸಬೇಕಾಯಿತು. ಹೈಕಮಾಂಡ್ ತಾಕೀತು ಮೇರೆಗೆ ಅಳೆದು ತೂಗಿ ಸಮತೋಲಿತ ಸಂಪುಟ ರಚಿಸುವಲ್ಲಿ ಯಶ ಕಂಡರು. ಸಚಿವ ಸ್ಥಾನ ಕೈ ತಪ್ಪಿದವರ ಬಂಡಾಯದ ಕಿಡಿ ಅಷ್ಟೇ ಬೇಗ ಶಮನಗೊಳಿಸುವ ಅನಿವಾರ್ಯತೆಯೂ ಎದುರಾಯಿತು.
ಸಂಪುಟ ರಚನೆಯ ಅಗ್ನಿ ಪರೀಕ್ಷೆಯ ಬಳಿಕ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದ್ದು, ಖಾತೆ ಹಂಚಿಕೆಯೆ ವಿಘ್ನ. ಹಿರಿಯ ಸಚಿವರು ಹಾಗೂ ನೂತನ ಸಚಿವರಿಗೆ ಸಮತೋಲಿತ ಖಾತೆಗಳನ್ನು ನೀಡುವ ಸಂದಿಗ್ಧ ಪರಿಸ್ಥಿತಿ ಸಿಎಂ ಬೊಮ್ಮಾಯಿ ಸರ್ಕಾರದ್ದಾಗಿತ್ತು. ಕೊನೆಗೆ ಹೈಕಮಾಂಡ್ ಅಣತಿಯಂತೆ ಖಾತೆ ಹಂಚಿಕೆ ಮಾಡಲಾಯಿತು. ಕೆಲವರು ತಮಗೆ ನೀಡಿದ ಖಾತೆ ಹಂಚಿಕೆಯಿಂದ ಅತೃಪ್ತರಾದರೂ, ಅನಿವಾರ್ಯವಾಗಿ ಅಧಿಕಾರ ಸ್ವೀಕರಿಸಿದರು.
ಒಂದು ವರ್ಷದ ಆಡಳಿತದಲ್ಲಿ ಸಂಪುಟ ವಿಸ್ತರಣೆಯ ಸವಾಲು ಆಗಾಗ ಬೊಮ್ಮಾಯಿ ಸರ್ಕಾರವನ್ನು ಕಾಡುತ್ತಲೇ ಇತ್ತು. ಉಳಿದಿರುವ ಸಂಪುಟ ಭರ್ತಿ ಮಾಡಲು ಹಲವು ಆಕಾಂಕ್ಷಿಗಳಿಂದ ಒತ್ತಡ ಬರುತ್ತಲೇ ಇದೆ. ಆದರೆ ಎಲ್ಲವನ್ನೂ ಹೈಕಮಾಂಡ್ನತ್ತ ಬೊಟ್ಟು ಮಾಡುವ ಮೂಲಕ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆಯ ಬೇಡಿಕೆಯ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಿದರು.
ಆರ್ಥಿಕ ಸಂಕಷ್ಟದಡಿ ಚೊಚ್ಚಲ ಬಜೆಟ್ನ ಸವಾಲು:ಬೊಮ್ಮಾಯಿ ಸರ್ಕಾರವನ್ನು ಅತಿಯಾಗಿ ಕಾಡಿರುವುದು ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟದ ಬರೆ. ಎರಡನೇ ಅಲೆಗೆ ಹೇರಿದ ಲಾಕ್ಡೌನ್ನಿಂದ ಆಗಲೇ ಸೊರಗಿದ ಬೊಕ್ಕಸವನ್ನು ಮತ್ತಷ್ಟು ಮಂಡಿಯೂರವಂತೆ ಮಾಡಿತು. ಇದರಿಂದ ಬೊಮ್ಮಾಯಿ ಸರ್ಕಾರಕ್ಕೆ ಹಣಕಾಸು ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆ ಬೊಮ್ಮಾಯಿಗೆ ಜನಪರವಾದ, ಹೊರೆ ಇಲ್ಲದ ಹಿತವಾದ ಚೊಚ್ಚಲ ಬಜೆಟ್ ಘೋಷಿಸುವ ಅನಿವಾರ್ಯತೆ ಬೊಮ್ಮಾಯಿ ಸರ್ಕಾರದ್ದಾಗಿತ್ತು.
ಇದೀಗ ನಿಧಾನವಾಗಿ ಆರ್ಥಿಕ ಪರಿಸ್ಥಿತಿ ಚೇತರಿಕೆಯಾಗುತ್ತಿದ್ದು, ಲಾಕ್‌ಡೌನ್ ಪೂರ್ವ ಸ್ಥಿತಿಗೆ ಆದಾಯ ಮೂಲ ಚೇತರಿಸಿಕೊಳ್ಳುತ್ತಿದೆ. ಆ ಮೂಲಕ ಆರ್ಥಿಕ ಸಂಕಷ್ಟದಿಂದ ಬಹುತೇಕ ಪಾರಾಗುವಲ್ಲಿ ಬೊಮ್ಮಾಯಿ ಸರ್ಕಾರ ಸಫಲವಾಗಿದೆ. ಈ ಮಧ್ಯೆ ಚುನಾವಣೆ ವರ್ಷದ ಸನಿಹದಲ್ಲಿನ ಪೂರ್ಣ ಪ್ರಮಾಣದ ಬಜೆಟ್ ಆಗಿರುವುದರಿಂದ ಜನಪ್ರಿಯ, ಹೊರೆ ಇಲ್ಲದ ಚೊಚ್ಚಲ ಬಜೆಟ್ ಮಂಡಿಸುವ ಅನಿವಾರ್ಯತೆ ಬೊಮ್ಮಾಯಿ ಸರ್ಕಾರದ್ದಾಗಿತ್ತು. ಆದರೆ, ಬೊಮ್ಮಾಯಿ ಸರ್ಕಾರ ಹಿತ-ಮಿತವಾದ, ಹೊರೆಯಿಲ್ಲದ ಬಜೆಟ್ ಮಂಡಿಸುವಲ್ಲಿ ತಕ್ಕಮಟ್ಟಿಗೆ ಸಫಲವಾಯಿತು.
ಮೀಸಲಾತಿ ಹೋರಾಟದ ಕಿಚ್ಚು:ಇತ್ತ ಪಂಚಮಸಾಲಿ ಮೀಸಲಾತಿ ಹೋರಾಟದ ಕಿಚ್ಚು ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಸವಾಲಿನ ವಿಚಾರವಾಗಿತ್ತು. ಪಂಚಮಸಾಲಿ ಜೊತೆಗೆ ವಿವಿಧ ಸಮುದಾಯಗಳು ಮೀಸಲಾತಿ ಕೂಗನ್ನು ಮತ್ತಷ್ಟು ಗಟ್ಟಿಗೊಳಿಸಿದ್ದವು. ವರ್ಷದ ಆಡಳಿತದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಮೀಸಲಾತಿ ಹೋರಾಟ ದೊಡ್ಡ ಸವಾಲಾಗಿ ಕಾಡಿತು.
ಅತಿ ಸೂಕ್ಷ್ಮ ವಿಚಾರವಾದ ಮೀಸಲಾತಿ ಕೂಗನ್ನು ಜಾಗರೂಕವಾಗಿ ನಿಭಾಯಿಸುವ ಸಂದಿಗ್ಧ ಪರಿಸ್ಥಿತಿ ಬೊಮ್ಮಾಯಿ ಸರ್ಕಾರದ್ದಾಗಿದೆ. ರಾಜಕೀಯ ಲಾಭ ನಷ್ಟದ ಮೀಸಲಾತಿ ಹೋರಾಟ ಕೈ ಮೀರದಂತೆ ನಿಭಾಯಿಸುವ ಸವಾಲು ಸರ್ಕಾರಕ್ಕಿತ್ತು. ಅದರಲ್ಲೂ ಪಂಚಮಸಾಲಿ ಸಮುದಾಯದವರ ಮೀಸಲಾತಿ ಹೋರಾಟ ಉಲ್ಬಣಿಸದಂತೆ ನೋಡಿಕೊಳ್ಳುವ ಪರೀಕ್ಷೆ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದೆ. ಇದನ್ನು ನಿಭಾಯಿಸಲು ಬೊಮ್ಮಾಯಿ ಸರ್ಕಾರ ತಕ್ಕಮಟ್ಟಿಗೆ ಯಶಸ್ಸು ಕಂಡಿದೆ. ಸದ್ಯ ಎಸ್ಟಿ ಮೀಸಲಾತಿ ಹೆಚ್ಚಳ, ಪಂಚಮಸಾಲಿ 2ಎ ಮೀಸಲಾತಿ, ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಗಳಿಗೆ ಸ್ಪಂದಿಸುವುದು ಬೊಮ್ಮಾಯಿ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.
ಪುನೀತ್ ರಾಜ್‍ಕುಮಾರ್ ನಿಧನದ ಬರಸಿಡಿಲು:ರಾಜ್ಯ ಸರ್ಕಾರಕ್ಕೆ ಎದುರಾದ ಅತಿದೊಡ್ಡ ಸವಾಲು ನಟ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ. ಅಪ್ಪು ಹೃದಯಾಘಾತದಿಂದ ನಿಧನದ ಸುದ್ದಿ ಕುಟುಂಬ, ಅಭಿಮಾನಿಗಳಿಗೆ ಮಾತ್ರವಲ್ಲ ಸರ್ಕಾರಕ್ಕೂ ಬರಸಿಡಿಲಿನಂತೆ ಎದುರಾಯಿತು.
ಡಾ.ರಾಜಕುಮಾರ್ ನಿಧನದ ವೇಳೆ ಸಂಭವಿಸಿದ ಹಿಂಸಾಚಾರ ಸರ್ಕಾರದ ಕಣ್ಣ ಮುಂದೆ ಬಂದಿತ್ತು. ಪುನೀತ್ ರಾಜ್‍ಕುಮಾರ್ ನಿಧನದಿಂದಲೂ ಅದೇ ಹಿಂಸಾಚಾರ ಮರುಕಳಿಸುವ ಆತಂಕ ಎದುರಾಗಿತ್ತು. ಆದರೆ ಬೊಮ್ಮಾಯಿ ಸರ್ಕಾರ ಅಪ್ಪು ನಿಧನ, ಅಂತಿಮ ದರ್ಶನ, ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ಜಾಗರೂಕತೆಯಿಂದ, ಅಚ್ಚಕಟ್ಟಾಗಿ ನಿಭಾಯಿಸುವಲ್ಲಿ ಸಫಲವಾಯಿತು.