ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆಗಳ ಸುಧಾರಣೆ, ಸಮಿತಿ ಸಲಹೆ ಜಾರಿ ಕುರಿತು ಸಂಪುಟದಲ್ಲಿ ಚರ್ಚೆ: ಸಿಎಂ..! - ಸಾರಿಗೆ ಸಂಸ್ಥೆಗಳ ಸುಧಾರಣೆ ಬಗ್ಗೆ ಕೃಷ್ಣಾದಲ್ಲಿ ಸಿಎಂ ಚರ್ಚೆ

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆಯ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯ ಏಕ ಸದಸ್ಯ ಸಮಿತಿ ಹಾಗೂ ಸರ್ಕಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಅಂಶಗಳ ಕುರಿತು ಚರ್ಚಿಸಿದರು.

KSRTC_MEETING_
ಸಾರಿಗೆ ಸಂಸ್ಥೆಗಳ ಸುಧಾರಣೆಗೆ ಚರ್ಚೆ

By

Published : Jul 5, 2022, 8:52 PM IST

Updated : Jul 5, 2022, 9:20 PM IST

ಬೆಂಗಳೂರು : ರಾಜ್ಯ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆಯ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯ ಏಕ ಸದಸ್ಯ ಸಮಿತಿ ನೀಡುವ ಸಲಹೆಗಳನ್ನು ಸಚಿವ ಸಂಪುಟದ ಮುಂದಿಟ್ಟು, ಸುಧಾರಣಾ ಕ್ರಮಗಳನ್ನು ಆದ್ಯತೆಗೆ ಅನುಸಾರವಾಗಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಿತಿ ಅಧ್ಯಕ್ಷರು ಮತ್ತು ಸರ್ಕಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಅಂಶಗಳ ಕುರಿತು ಚರ್ಚಿಸಿದರು. ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯಾಚರಣೆಯ ವಿವಿಧ ಆಯಾಮಗಳ ಕುರಿತು ಚರ್ಚಿಸಲಾಯಿತು. ಇಂಧನ ಹಾಗೂ ಮಾನವ ಸಂಪನ್ಮೂಲ ಸದ್ಬಳಕೆಗೆ ಒತ್ತು ನೀಡುವುದರೊಂದಿಗೆ, ತಂತ್ರಜ್ಞಾನದ ಅಳವಡಿಕೆ, ಹಣಕಾಸು ನಿರ್ವಹಣೆ, ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತ ಸೌಲಭ್ಯಗಳನ್ನು ಕಲ್ಪಿಸುವುದು ಮೊದಲಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ:ಯಾಕೆ ಈ ಮೀಟಿಂಗ್​.. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಸರಣಿ ಸಭೆ..!

ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ವ್ಯವಸ್ಥಿತವಾಗಿ ಜಾರಿಗೆ ತರಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ಸಚಿವ ಸಂಪುಟದ ಮುಂದಿಟ್ಟು, ಅನುಮೋದನೆ ಪಡೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಕುರಿತು ಇಂದು ಪ್ರೊ. ಅಶೋಕ ಶೆಟ್ಟರ್ ನೇತೃತ್ವದ ಟಾಸ್ಕ್ ಫೋರ್ಸ್ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಕುರಿತಂತೆ ಟಾಸ್ಕ್ ಫೋರ್ಸ್ ಅಧ್ಯಕ್ಷರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ, ಒಟ್ಟಾರೆಯಾಗಿ ಈ ವಲಯವನ್ನು ಪರಿಗಣಿಸಿದಾಗ, ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಆದ್ದರಿಂದ ಈ ಕ್ಷೇತ್ರದ ಅಭಿವೃದ್ಧಿಗೆ ವ್ಯವಸ್ಥಿತ ಚೌಕಟ್ಟು ನೀಡುವ ಅಗತ್ಯವಿದೆ. ಜೊತೆಗೆ ನೀತಿಯು ಅತ್ಯಂತ ಸರಳವಾಗಿದ್ದು, ಜನಸಾಮಾನ್ಯರಿಗೂ ಅರ್ಥವಾಗುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ಸಂಶೋಧನೆ ಮತ್ತು ಅಭಿವೃದ್ಧಿಯ ಫಲಶ್ರುತಿ ಮಾನವನ ದೈನಂದಿನ ಜೀವನದಲ್ಲಿ ಬಳಕೆಯಾದಾಗ ಸಾರ್ಥಕವೆನಿಸುತ್ತದೆ ಎಂದ ಮುಖ್ಯಮಂತ್ರಿಗಳು, ಗ್ರಾಮೀಣ ಜನರು, ವ್ಯಕ್ತಿಗಳ ಸಂಶೋಧನೆಗಳಿಗೂ ಮಾನ್ಯತೆ ನೀಡುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ. ಜೊತೆಗೆ ಈ ನೀತಿ ಯಾವುದೇ ಒಂದು ನಿರ್ದಿಷ್ಟ ವಲಯಕ್ಕೆ ಸೀಮಿತವಾಗದೆ ಎಲ್ಲ ವಲಯಗಳಿಗೂ ಅನ್ವಯವಾಗುವಂತೆ ರೂಪಿಸಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಅಭಿವೃದ್ಧಿ ಆಯುಕ್ತರು ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ್, ವಿವಿಧ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Last Updated : Jul 5, 2022, 9:20 PM IST

ABOUT THE AUTHOR

...view details