ಬೆಂಗಳೂರು: ಸಚಿವ ಸಂಪುಟ ರಚನೆಗೆ ಕೊನೆಗೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ ಸಂಜೆ 5 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಪೂರ್ಣ ಪ್ರಮಾಣದ ಕ್ಯಾಬಿನೆಟ್ ರಚನೆಯಿಂದ ಹಿಂದೆ ಸರಿದಿರುವ ಹೈಕಮಾಂಡ್ 20 - 24 ಸಚಿವರ ಮೊದಲ ತಂಡ ರಚನೆಗೆ ನಿರ್ಧರಿಸಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರು ದಿನಗಳ ದೆಹಲಿ ಪ್ರವಾಸ ಕಡೆಗೂ ಸಫಲವಾಗಿದ್ದು, ಸಂಪುಟ ರಚನೆಗೆ ಹೈಕಮಾಂಡ್ ಸಮ್ಮತಿ ನೀಡಿದೆ. ಸಂಭಾವ್ಯ ಸಚಿವರ ಪಟ್ಟಿಯನ್ನ ಹೈಕಮಾಂಡ್ ರಾಜ್ಯಕ್ಕೆ ಕಳುಹಿಸಿಕೊಡುತ್ತದೆ. ಪಟ್ಟಿಯಲ್ಲಿರುವ ಭಾವಿ ಸಚಿವರಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖುದ್ದು ಕರೆ ಮಾಡಿ ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಲಿದ್ದಾರೆ.
ಡಿಸಿಎಂ ಹುದ್ದೆ ಅನುಮಾನ:ಹಿರಿಯರು, ಅರ್ಹರಿಗೆ ಅಸಮಾಧಾನವಾಗುವ ಆತಂಕ ಹಾಗೂ ಅನಗತ್ಯ ಗೊಂದಲ ಸೃಷ್ಟಿಯಾಗುವ ಕಾರಣದಿಂದ ಉಪಮುಖ್ಯಮಂತ್ರಿ ಹುದ್ದೆ ಕೈಬಿಡಲು ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಆದರೆ, ಪಟ್ಟಿ ಬಿಡುಗಡೆಯಾದ ನಂತರವೇ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
ಬಿಎಸ್ವೈ ಶಿಫಾರಸ್ಸಿಗೆ ಮಣೆ: ಮಾಜಿ ಸಿಎಂ ಯಡಿಯೂರಪ್ಪ ಶಿಫಾರಸ್ಸು ಮಾಡಿದ್ದ ಹೆಸರುಗಳಿಗೆ ಹೈಕಮಾಂಡ್ ಸಮ್ಮತಿ ನೀಡಿದೆ ಎಂದು ತಿಳಿದುಬಂದಿದೆ. ಬಿಎಸ್ವೈ ಅವರ ಆಕ್ರೋಶಕ್ಕೆ ಸಿಲುಕಿ ಆಡಳಿತ ನಡೆಸಲು ಅಸಾಧ್ಯ ಎನ್ನುವುದನ್ನ ಮನಗಂಡಿರುವ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ.
ಸಿಎಂ ಬೆಂಗಳೂರಿಗೆ ಬಂದ ನಂತರ ಸ್ಪಷ್ಟತೆ: ಸಂಜೆ 7.50ರ ವಿಮಾನದಲ್ಲಿ ರಾಜ್ಯಕ್ಕೆ ವಾಪಸ್ ಆಗಲಿರುವ ಸಿಎಂ ಬೊಮ್ಮಾಯಿ 10.30 ಕ್ಕೆ ಬೆಂಗಳೂರು ತಲುಪಲಿದ್ದಾರೆ. ಅವರು ವಾಪಸ್ ಆದ ನಂತರ ಸಂಪುಟ ರಚನೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.