ಬೆಂಗಳೂರು: ಸಿಲಿಕಾನ್ ಸಿಟಿಯ ಹೆಸರಾಂತ ಮತ್ತು ಪುರಾತನ ದೇವಸ್ಥಾನ ಅಂದರೆ ಅದು ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ. ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿಯೂ ಶ್ರೀಮಂತವಾಗಿರುವ ದೇವಸ್ಥಾನದ ದೊಡ್ಡ ಗಣೇಶನ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವದಂತಿ ಕೇಳಿ ಬಂದಿದೆ.
ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಗಣೇಶ ಮೂರ್ತಿ ಬಿರುಕು ಬಿಟ್ಟ ವದಂತಿ ಗರ್ಭಗುಡಿಯಲ್ಲಿರುವ ಗಣೇನ ಮೂರ್ತಿಯು ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲವಿದ್ದು, ಉದ್ಭವ ಗಣಪ ಎಂತಲೂ ಹೇಳುತ್ತಾರೆ. ಸದ್ಯ ಈ ಪವರ್ ಫುಲ್ ಗಣೇಶನ ಮೂರ್ತಿಯಲ್ಲಿ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಅದು ಕೂಡ ಬೆಣ್ಣೆ ಅಲಂಕಾರದಿಂದ ಹೀಗಾಗಿದೆ ಎಂಬ ವದಂತಿ ಹಬ್ಬಿದೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ ದೀಕ್ಷಿತ್, ಇದೆಲ್ಲಾ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಗಣೇಶನ ವಿಗ್ರಹ ವರ್ಷದಿಂದ ವರ್ಷಕ್ಕೆ ಸ್ವಲ್ಪ ಸ್ವಲ್ಪವೇ ಬೆಳೆಯುತ್ತಿದೆ. ನಾನು ಇಲ್ಲಿ ಅರ್ಚಕನಾಗಿ ಸೇರಿಕೊಂಡಾಗ ವಿಗ್ರಹದ ಎರಡೂ ಬದಿ ಮೆಟ್ಟಿಲಿತ್ತು, ಈಗ ಅದಿಲ್ಲ, ಗಣೇಶ ಬೆಳೆದಿದ್ದಾನೆ. ಅದನ್ನೇ ಜನ ಗಣೇಶನ ವಿಗ್ರಹ ಬದಲಾಗಿದೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಗಣೇಶ ವಿಗ್ರಹಕ್ಕೆ ಏನು ಆಗಿಲ್ಲ ಅಂತಾ ತಿಳಿಸಿದ್ದಾರೆ.
ಬೆಣ್ಣೆ ಹಚ್ಚುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಬಿಸಿಲಿನ ತಾಪಕ್ಕೆ ಬೆಣ್ಣೆ ಜಿನುಗುತ್ತದೆ ಅಷ್ಟೇ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ ಅಂತಾ ಸ್ಪಷ್ಟ ಪಡಿಸಿದ್ದಾರೆ.