ಬೆಂಗಳೂರು: ಮನೆಗೆಲಸಕ್ಕಾಗಿ ಬಂದವನು ಮಾಲೀಕನ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ತಲೆಮರೆಸಿಕೊಂಡಿದ್ದ. ಕೊನೆಗೂ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಬಸವನಗುಡಿ ಪೊಲೀಸರು ಜೈಪುರ ಮೂಲದ ಕುಶಾಲ್ ಸಿಂಗ್ ಬಂಧಿತ ಆರೋಪಿ. ಬಸವನಗುಡಿಯ ನ್ಯಾಷನಲ್ ಕಾಲೇಜು ಬಳಿ ವಾಸವಾಗಿದ್ದ ಅಶೋಕ್ ಎಂಬುವರು ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಮನೆ ಸ್ವಚ್ಛಗೊಳಿಸಲು ಸಂಬಂಧಿಕರ ಸೂಚನೆ ಮೇರೆಗೆ ಕಳೆದ ತಿಂಗಳು 27ರಂದು ಜೈಪುರದಿಂದ ಕುಶಾಲ್ ಸಿಂಗ್ನನ್ನು ಕರೆಸಿಕೊಂಡಿದ್ದರು.
ಮನೆಯಲ್ಲಿ ಶುಚಿ ಮಾಡುವಂತೆ ಹೇಳಿ ಕುಟುಂಬಸ್ಥರೆಲ್ಲರೂ ಚಿಕ್ಕಪೇಟೆಯ ಜವಳಿ ಅಂಗಡಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಕೀ ಸಿಕ್ಕಿದ್ದು, ಲಾಕರ್ನಲ್ಲಿದ್ದ ಒಂದು ಕೆಜಿ ಚಿನ್ನಾಭರಣ ಮತ್ತು 250 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾನೆ.
ಕುಟುಂಬಸ್ಥರು ಮನೆಗೆ ವಾಪಸ್ ಬರುವಷ್ಟರಲ್ಲಿ ಯಾರಿಗೂ ಅನುಮಾನ ಬರದಂತೆ ಮನೆ ಕ್ಲೀನ್ ಮಾಡಿ ಕುಶಾಲ್ ಚಾಣಕ್ಷತನ ಮರೆದಿದ್ದ. ಕೃತ್ಯದ ಬಳಿಕ ಬೀಗದ ಕೀ ಅಲ್ಲೇ ಇಟ್ಟು, ಹಣ ಪಡೆದು ವಾಪಸ್ ಊರಿಗೆ ಹೋಗಿದ್ದಾನೆ. ದೀಪಾವಳಿ ಹಬ್ಬದ ದಿನದಂದು ಪೂಜೆಗಾಗಿ ಲಾಕರ್ ಕೀ ತೆಗೆದು ಲಾಕರ್ ಓಪನ್ ಮಾಡಿದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ಕೂಡಲೇ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಜೈಪುರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಆತನಿಂದ 38 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.