ಕರ್ನಾಟಕ

karnataka

ETV Bharat / state

ಹೊಸ ಯೋಜನೆಗಳ ಮಹಾಪೂರ: ವಿವಿಧ ಯೋಜನೆಗಳಿಗೆ ಸಿಕ್ಕ ಅನುದಾನದ ಸಂಪೂರ್ಣ ವಿವರ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನೂನತ ಯೋಜನೆಗಳ ಘೋಷಣೆ

2022-23 ನೇ ಸಾಲಿಗೆ 72 ಸಾವಿರ ಕೋಟಿ ಸಾಲ, 72,089 ಕೋಟಿ ಬಂಡವಾಳ ಜಮೆಗಳು ಹಾಗೂ 1,89,888 ರಾಜಸ್ವ ಆದಾಯ ಸೇರಿ ಒಟ್ಟು 2,61,977 ಕೋಟಿ ಜಮೆಯನ್ನು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ.

ನೂತನ ಬಜೆಟ್​ ಮಂಡಿಸಿದ ಬಸವಾಜ ಬೊಮ್ಮಾಯಿ
ನೂತನ ಬಜೆಟ್​ ಮಂಡಿಸಿದ ಬಸವಾಜ ಬೊಮ್ಮಾಯಿ

By

Published : Mar 4, 2022, 5:51 PM IST

ಬೆಂಗಳೂರು: ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡುವ, ಹೊಸ ಯೋಜನೆಗಳನ್ನು ಪರಿಚಯಿಸಿರುವ 2,65,720 ಲಕ್ಷ ಕೋಟಿ ರೂ. ಗಾತ್ರದ 2022-23 ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ಮಂಡಿಸಿದ್ದಾರೆ.

2022-23 ನೇ ಸಾಲಿಗೆ 72 ಸಾವಿರ ಕೋಟಿ ಸಾಲ, 72,089 ಕೋಟಿ ಬಂಡವಾಳ ಜಮೆಗಳು ಹಾಗೂ 1,89,888 ರಾಜಸ್ವ ಆದಾಯ ಸೇರಿ ಒಟ್ಟು 2,61,977 ಕೋಟಿ ಜಮೆಯನ್ನು ಅಂದಾಜಿಸಲಾಗಿದೆ.

ಇದರಲ್ಲಿ 2,04,587 ಕೋಟಿ ರಾಜಸ್ವ ವೆಚ್ಚವಾಗಿದ್ದು, 46,955 ಕೋಟಿ ರೂ.ಗಳು ಬಂಡವಾಳ ವೆಚ್ಚವಾಗಿವೆ. ಸಾಲ ಮರುಪಾವತಿಗೆ 14,179 ಕೋಟಿ ರೂ. ಒಳಗೊಂಡು, ಒಟ್ಟು ಆಯವ್ಯಯದ ಗಾತ್ರವನ್ನು 2,65,720 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ.

ಅದೇ ಕಾಲಕ್ಕೆ ಪೆಟ್ರೋಲ್,ಡೀಸೆಲ್ ,ಮದ್ಯ ಸೇರಿದಂತೆ ಯಾವ ವಸ್ತುಗಳ ಮೇಲೆ ಹೊಸ ತೆರಿಗೆ ಹೇರದೆ ಜನಸಾಮಾನ್ಯರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.


ಕೇಂದ್ರದಿಂದ ಬರುವ ಜಿ.ಎಸ್.ಟಿ ಪಾಲು ಸ್ಥಗಿತವಾಗುವ ಘಳಿಗೆ ಹತ್ತಿರ ಬಂದಿದ್ದು, ಕೇಂದ್ರದ ನೆರವು ಕುಂಟುತ್ತಾ ಬಂದಿದ್ದರೂ ಎದೆಗುಂದದೆ ಸರ್ವರನ್ನು ಸಂತೋಷಪಡಿಸುವ ಪ್ರಯತ್ನ ಮಾಡಿರುವ ಮುಖ್ಯಮಂತ್ರಿಗಳು ಬಜೆಟ್ ಬಂಡೆಯನ್ನು ಮೆಲ್ಲಗೆ ಕರ್ನಾಟಕದ ಮೇಲಿಳಿಸಿದ್ದಾರೆ.

113 ಪುಟಗಳ ಬಜೆಟ್:113 ಪುಟಗಳ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಕಷ್ಟದ ನಡುವೆಯೂ ಬಜೆಟ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂದು ಸಮರ್ಥಿಸಿಕೊಂಡರು.

ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜದ ಎಲ್ಲರಿಗೆ ಬಜೆಟ್ ಮೂಲಕ ಶಕ್ತಿ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಜೆಟ್ ಗಾತ್ರವನ್ನು ಸರಿದೂಗಿಸಲು 2022-23 ರಲ್ಲಿ ಒಟ್ಟು 72 ಸಾವಿರ ಕೋಟಿ ರೂ. ಸಾಲ ಪಡೆಯಲಾಗುವುದು. ಆ ಮೂಲಕ ರಾಜ್ಯದ ಒಟ್ಟು ಸಾಲದ ಪ್ರಮಾಣ ಐದು ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿ ಒಟ್ಟು 5,18,366 ಕೋಟಿ ರೂ.ಗಳಷ್ಟಾಗಲಿದೆ ಎಂದು ಅವರು ವಿವರಿಸಿದರು.

ರಾಜ್ಯದ ಸ್ವಂತ ತೆರಿಗೆಗಳ ಮೂಲಕ 1,31,883 ಕೋಟಿ ರೂಪಾಯಿ,ಸಾಲಗಳ ಮೂಲಕ 72 ಸಾವಿರ ಕೋಟಿ ರೂಪಾಯಿ,ತೆರಿಗೆಯೇತರ ರಾಜಸ್ವದಿಂದ 10,941 ಕೋಟಿ ರೂಪಾಯಿ,ಕೇಂದ್ರ ತೆರಿಗೆಯ ಪಾಲಿನಿಂದ 29,783ಕೋಟಿ ರೂಪಾಯಿ,ಕೇಂದ್ರದ ಸಹಾಯಾನುದಾನದ ರೂಪದಲ್ಲಿ 17,281 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದು ಬಜೆಟ್ ಗುರಿ ಎಂದು ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದ ತೆರಿಗೆಗಳ ಪೈಕಿ ವಾಣಿಜ್ಯ ತೆರಿಗೆಗಳಿಂದ 77,010 ಕೋಟಿ ರೂಪಾಯಿ,ಅಬಕಾರಿ ಬಾಬ್ತಿನಲ್ಲಿ 29 ಸಾವಿರ ಕೋಟಿ ರೂಪಾಯಿ,ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೂಲಕ 15 ಸಾವಿರ ಕೋಟಿ ರೂಪಾಯಿ,ಮೋಟಾರುವ ವಾಹನ ತೆರಿಗೆ ಬಾಬ್ತಿನಲ್ಲಿ 8007 ಕೋಟಿ ರೂಪಾಯಿ ಇತರ ಬಾಬ್ತುಗಳಿಂದ 2866 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಯಾವ ಇಲಾಖೆಗೆ ಎಷ್ಟೆಷ್ಟು?ಶಿಕ್ಷಣಕ್ಕೆ 31,980 ಕೋಟಿ ರೂಪಾಯಿ, ಜಲಸಂಪನ್ಮೂಲಕ್ಕೆ 20,601 ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ 17,325 ಕೋಟಿ ರೂಪಾಯಿ, ಕಂದಾಯಕ್ಕೆ 14,388 ಕೋಟಿ ರೂ.,ಆರೋಗ್ಯಕ್ಕೆ 13,982 ಕೋಟಿ ರೂಪಾಯಿ,ಇಂಧನಕ್ಕೆ 12655 ಕೋಟಿ ರೂಪಾಯಿ. ಒಳಾಡಳಿತ ಮತ್ತು ಸಾರಿಗೆಗೆ 11,272 ಕೋಟಿ ರೂ., ಲೋಕೋಪಯೋಗಿಗೆ 10,447 ಕೋಟಿ ರೂ., ಸಮಾಜ ಕಲ್ಯಾಣಕ್ಕೆ 9,380 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆಗೆ 8,457 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ4,713 ಕೋಟಿ, ವಸತಿಗೆ 3,594 ಕೋಟಿ ಮತ್ತು ಆಹಾರ ನಾಗರೀಕ ಸರಬರಾಜು ಬಾಬ್ತಿಗೆ 2,988 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ತಮ್ಮ ಬಜೆಟ್​​ಗೆ ರಾಜ್ಯ ತೆರಿಗೆ ಬಾಬ್ತಿನಿಂದ ಶೇ. 50 ರಷ್ಟು ಆದಾಯ ಬಂದರೆ, ಸಾಲದ ಮೂಲಕ ಶೇ. 27 ರಷ್ಟು ಹಣ ಬರಲಿದೆ. ಉಳಿದಂತೆ ಕೇಂದ್ರದ ತೆರಿಗೆ ಪಾಲಿನಿಂದ ಶೇ. 11 ರಷ್ಟು, ಕೇಂದ್ರದ ಸಹಾಯಾನುಧಾನದಿಂದ ಶೇ. 4 ರಷ್ಟು, ರಾಜ್ಯ ತೆರಿಗೆಯೇತರ ರಾಜಸ್ವದಿಂದ ಶೇ. 4 ರಷ್ಟು,ಸಾರ್ವಜನಿಕ ಲೆಕ್ಕದಿಂದ ಶೇ. 2 ರಷ್ಟು ಆದಾಯ ಬರಲಿದೆ ಎಂದು ವಿವರಿಸಿದರು.

ಸಾಲ ಮರುಪಾವತಿಗಾಗಿ ತಮ್ಮ ಸರ್ಕಾರ 14,179 ಕೋಟಿ ರೂ.ಗಳನ್ನು ಒದಗಿಸಲಿದೆ ಎಂದು ಅವರು ಹೇಳಿದರು. ರೈತರ ಆದಾಯ ಹೆಚ್ಚಳ ಮಾಡಲು ತಮ್ಮ ಸರ್ಕಾರ ಬಯಸಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡಲು ಪ್ರತಿ ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ ಒದಗಿಸಲು 600 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು ಎಂದ ಅವರು, ಬಡ್ಡಿ ರಿಯಾಯಿತಿ ಯೋಜನೆಯಡಿ ಮೂರು ಲಕ್ಷ ಹೊಸ ರೈತರು ಸೇರಿದಂತೆ ಒಟ್ಟು 33 ಲಕ್ಷ ರೈತರಿಗೆ 2,000 ಕೋಟಿ ರೂ ಸಾಲ ನೀಡಲಾಗುವುದು ಎಂದರು.

ಯಶಸ್ವಿನಿ ಯೋಜನೆ:ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಪರಿಷ್ಕೃತ ರೂಪದಲ್ಲಿ ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಲು ಸರ್ಕಾರ ನಿರ್ಧರಿಸಿದ್ದು,ಇದಕ್ಕಾಗಿ ಮುನ್ನೂರು ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ ಅವರು, ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರತಿಟನ್ ದ್ವಿತಳಿ ರೇಷ್ಮೆ ಗೂಡಿಗೆ ಹತ್ತು ಸಾವಿರ ರೂ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು. ದ್ವಿತಳಿ ಬಿತ್ತನೆ ಗೂಡಿಗೆ ಪ್ರತಿ ಕೆಜಿಗೆ 50 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ವಿವರ ನೀಡಿದರು.

ಆಕಸ್ಮಿಕ ಮರಣಕ್ಕೆ 5 ಲಕ್ಷ:ರಾಜ್ಯದಲ್ಲಿ ನೂರು ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು. ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲೇ ಮೊದಲ ಬಾರಿಗೆ ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ಸ್ಥಾಪಿಸಲಾಗುವುದು, ಗೋಶಾಲೆಗಳ ಸಂಖ್ಯೆಯನ್ನು ನೂರಕ್ಕೆ ಹೆಚ್ಚಳ ಮಾಡಲಾಗುವುದು, ಗೋಶಾಲೆಗಳಲ್ಲಿನ ಗೋವುಗಳ ದತ್ತು ಪ್ರೋತ್ಸಾಹಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಲಾಗುವುದು,ಕುರಿ,ಮೇಕೆ ಸಾಕಾಣಿಕೆದಾರರು,ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಐದು ಲಕ್ಷ ರೂ .ವಿಮಾ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ನೀರಾವರಿ ಯೋಜನೆಗಳಿಗೆ 20 ಸಾವಿರ ಕೋಟಿರೂಗಳಷ್ಟು ಹಣ ಒದಗಿಸಲಾಗಿದೆ ಎಂದ ಅವರು,ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಗೆ 5,000 ಕೋಟಿ,ಮೇಕೆದಾಟು ಯೋಜನೆಗೆ 1,000 ಕೋಟಿ,ಕಳಸಾ ಬಂಡೂರಿ ಬಾಕ ತಿರುವು ಯೋಜನೆಗೆ 1,000 ಕೋಟಿ,ಭದ್ರಾ ಮೇಲ್ದಂಡೆ ಯೋಜನೆಗೆ 3,000 ಕೋಟಿ ಮತ್ತು ಎತ್ತಿನ ಹೊಳೆ ಯೋಜನೆಗೆ 3,000 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.

ಕಡಿಮೆ ಅಭಿವೃದ್ಧಿ ಸೂಚ್ಯಂಕ ಹೊಂದಿದ ತಾಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ,ಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ,ನವ ಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿ ವಿಭಾಗಗಳಲ್ಲಿ ಒಂದು ನವ ನಗರ ಸ್ಥಾಪನೆ. ಮೈಸೂರು-ಮಂಗಳೂರು-ಹುಬ್ಬಳ್ಳಿಗಳಲ್ಲಿ ಸ್ಟಾರ್ಟ್ ಅಪ್‌ಗಳ ಸ್ಥಾಪನೆಗೆ ಉತ್ತೇಜನ ನೀಡಲು ತಲಾ ಇಪ್ಪತ್ತು ಕೋಟಿ ರೂಪಾಯಿ, ಮೈಸೂರಿನಲ್ಲಿ ಮೂವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲು ನಿರ್ಧರಿಸಿದ್ದು,ಇದಕ್ಕಾಗಿ ಈ ವರ್ಷ ಹತ್ತು ಕೋಟಿ ರೂ. ಅನುದಾನ ನೀಡಲಾಗುವುದು.

ಹೋಬಳಿ ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಮಾದರಿ ಶಾಲೆಗಳನ್ನು ಉನ್ನತೀಕರಣಗೊಳಿಸಲಾಗುವುದು, ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಒದಗಿಸಲಾಗುವುದು, ಅಹಿಂದ ವರ್ಗದ ಮಕ್ಕಳಿಗಾಗಿ 250 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಸೇರಿದಂತೆ ರಾಜ್ಯದ ಐದು ಕಡೆ ತಲಾ ಒಂದು ಸಾವಿರ ಸಾಮರ್ಥ್ಯದ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗುವುದು, ಏಪ್ರಿಲ್ ಒಂದರಿಂದ ಪಡಿತರ ಚೀಟಿದಾರರಿಗೆ ಈಗಾಗಲೇ ಒದಗಿಸಲಾಗುತ್ತಿರುವ ಐದು ಕೆಜಿ ಅಕ್ಕಿಯ ಜತೆ ಇನ್ನೂ ಒಂದು ಕೆ ಜಿ ರಾಗಿ ಮತ್ತು ಜೋಳವನ್ನು ಒದಗಿಸಲಾಗುವುದು ಎಂದ ಮುಖ್ಯಮಂತ್ರಿಗಳು ಈ ಯೋಜನೆಯ ಲಾಭ 4.34 ಕೋಟಿ ಫಲಾನುಭವಿಗಳಿಗೆ ಲಭ್ಯವಾಗಲಿದ್ದು, ಇದಕ್ಕಾಗಿ 1,400 ರೂ ವೆಚ್ಚವಾಗಲಿದೆ ಎಂದು ಹೇಳಿದರು.

ಅವಿವಾಹಿತ,ವಿಚ್ಚೇದಿತ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿರುವ ಮಾಸಾಶನದ ಮೊತ್ತವನ್ನು 600 ರೂಗಳಿಂದ 800 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಆಸಿಡ್ ದಾಳಿಯ ಸಂತ್ರಸ್ತ ಮಹಿಳೆಯರ ಮಾಸಾಶನ ಮೊತ್ತವನ್ನು 10 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ರಾಜ್ಯದ ಸರ್ವರನ್ನೂ ತಲುಪುವ ಮತ್ತು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ತಮ್ಮ ಬಜೆಟ್​​ನ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

ABOUT THE AUTHOR

...view details