ಬೆಂಗಳೂರು:ಸೆ.15 ರೊಳಗೆ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವುದಾಗಿ ಹೇಳಿದ್ದರು. ಅಂದಿನ ಕಾನೂನು ಸಚಿವ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆ ಕಾಲ ಮಿತಿಯೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಕೂಡಲಸಂಗಮ ಪಂಚಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೆನಪಿಸಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾಧ್ಯಮಗೋಷ್ಠಿ ಇಂದು ಖಾಸಗಿ ಹೋಟೆಲ್ನಲ್ಲಿ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ಡಾ. ವಿಜಯಾನಂದ ಕಾಶಪ್ಪನವರ್ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಸ್ವಾಮೀಜಿ ಮಾತನಾಡಿದರು.
ಶಾಶ್ವತ ಪರಿಹಾರಕ್ಕೆ ಆಗ್ರಹ:
ಪಂಚಮಸಾಲಿ ಸಮಾಜದ ಪರವಾಗಿ ನೂತನ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇವೆ. ಉತ್ತರ ಕರ್ನಾಟಕದವರು ಸಿಎಂ ಆಗಿದ್ದಾರೆ. ಪ್ರವಾಹ ತಡೆಯಲು ಶಾಶ್ವತ ಪರಿಹಾರ ಕೊಡಬೇಕು. ಬೊಮ್ಮಾಯಿ ನೀರಾವರಿ ಸಚಿವರಾಗಿದ್ದವರು. ಜನರು ಪ್ರವಾಹಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕು. ಬೊಮ್ಮಾಯಿ ಮೇಲೆ ತುಂಬಾ ಜವಬ್ದಾರಿ ಇದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸಮುದಾಯದಿಂದ ಅಭಿಯಾನ:
ಆ.15 ರಿಂದ ಸೆ. 30 ರವರೆಗೂ ರಾಜ್ಯಾದ್ಯಂತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನಕ್ಕೆ ತೀರ್ಮಾನ ಮಾಡಲಾಗಿದೆ. ಮೀಸಲಾತಿ ವಿಚಾರವನ್ನು ಸರ್ಕಾರಕ್ಕೆ ನೆನಪಿಸಲು ಮಲೆ ಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಕೈಗೊಳ್ಳುತ್ತೇವೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ಜಾಗೃತಿ ಪಾದಯಾತ್ರೆ ಮಾಡುತ್ತೇವೆ. ಸರ್ಕಾರ ಭರವಸೆ ಈಡೇರಿಸದಿದ್ದರೆ ಅ.01ರಂದು ಧರಣಿ ಮಾಡುತ್ತೇವೆ. ನಮ್ಮ ಸಮುದಾಯಕ್ಕೆ ನೋವಾಗಿದೆ. ಅದನ್ನು ಸರಿಪಡಿಸಬೇಕು. ರಾಜಕೀಯ ಪ್ರಾತಿನಿದ್ಯ ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಹೈಕಮಾಂಡ್ಗೆ ಎಚ್ಚರಿಕೆ:
ಈಗಾಗಲೇ ಸಮುದಾಯದಲ್ಲಿ ಮೀಸಲಾತಿ ಸಿಕ್ಕಿಲ್ಲವೆಂಬ ಅಸಮಾಧಾನವಿದೆ. ಹಾಗಾಗಿ ಸಮಾಜದವರಿಗೆ ಸಚಿವ ಸ್ಥಾನ ನೀಡಬೇಕು. ಕೇಂದ್ರ ಬಿಜೆಪಿ ವರಿಷ್ಠರು ಪ್ರಾತಿನಿಧ್ಯ ಕೊಡುತ್ತಾರೆಂಬ ನಿರೀಕ್ಷೆಯಿದೆ. ಕೊಡದೆ ಹೋದರೆ ಸಮುದಾಯದ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ ಎಂದು ಬಿಜೆಪಿ ಹೈಕಮಾಂಡ್ಗೆ ಜಯಮೃತ್ಯುಂಜಯ ಎಚ್ಚರಿಕೆ ರವಾನಿಸಿದರು.
ಬಳಿಕ ಕಾಂಗ್ರೆಸ್ ಮುಖಂಡರು ಆಗಿರುವ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಯಡಿಯೂರಪ್ಪ ಮೀಸಲಾತಿ ಕೊಡುತ್ತೇನೆ ಎಂದು ಸದನದಲ್ಲಿ ನಮಗೆ ಮಾತು ಕೊಟ್ಟಿದ್ದರು. ರಾಜ್ಯದಲ್ಲಿ 2ಎ, ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿ ಕೆಲಸ ಆರಂಭಿಸಿದ್ದಾರೆ. ಅವರು ಇದರ ಬಗ್ಗೆ ಗಮನಹರಿಸಬೇಕು. ಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಡಬೇಕು. ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಆ ನಿರೀಕ್ಷೆ ಸಮುದಾಯಕ್ಕಿದೆ. ಸೆ.15 ರೊಳಗೆ ಮೀಸಲಾತಿ ಘೋಷಿಸಬೇಕು. ಇಲ್ಲವಾದರೆ ಅ.01 ರಂದು ಪ್ರತಿಭಟನೆ ನಡೆಸುತ್ತೇವೆ. ಅಂದಿನಿಂದ ಹೋರಾಟವನ್ನು ಮತ್ತೆ ಮುಂದುವರಿಸುತ್ತೇವೆ ಎಂದರು.
ಈಗಾಗಲೇ ಪ್ರವಾಹ ಎದುರಾಗಿ ಮಲಪ್ರಭಾ, ಘಟಪ್ರಭೆಯಿಂದ ಹಾನಿಯಾಗಿದೆ. ರೈತರು ಬೆಳೆ, ಜಾನುವಾರು, ಮನೆ-ಮಠ ಕಳೆದುಕೊಂಡಿದ್ದಾರೆ. 2019 ರಲ್ಲಿ ಉಂಟಾದ ಪ್ರವಾಹ ಪೀಡಿತರಿಗೆ ಇನ್ನೂ ನೆರವು ಸಿಕ್ಕಿಲ್ಲ. ಹಾಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.