ಕರ್ನಾಟಕ

karnataka

ETV Bharat / state

ಏ.14ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸದಿದ್ದರೆ ಉಗ್ರ ಹೋರಾಟ : ಜಯಮೃತ್ಯುಂಜಯ ಸ್ವಾಮೀಜಿ - ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕಳೆದ 10 ದಿನಗಳಿಂದ ನಡೆಯುತ್ತಿರುವ ಅಧಿವೇಶನದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಚರ್ಚೆಗಳಾಗಿಲ್ಲ. ಮೀಸಲಾತಿ ಕುರಿತಾದ ಜಯಪ್ರಕಾಶ್ ಹೆಗ್ಡೆ ಹಿಂದುಳಿದ ಆಯೋಗದ ವರದಿಯನ್ನೇ ಸರ್ಕಾರ ಪಡೆದುಕೊಂಡಿಲ್ಲ. ಹೀಗಾಗಿ, ಸರ್ಕಾರಕ್ಕೆ ಏಪ್ರಿಲ್ 14 ರವರೆಗೆ ಅಂತಿಮ ಗಡುವು ನೀಡಲಾಗಿದೆ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು..

ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ

By

Published : Mar 16, 2022, 2:33 PM IST

ಬೆಂಗಳೂರು: ಅಧಿವೇಶನ ಮುಗಿಯುವುದರೊಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ಏಪ್ರಿಲ್ 14ರೊಳಗೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪ್ರಮುಖರೊಂದಿಗಿನ ಮೀಸಲಾತಿ ಕುರಿತ ದುಂಡುಮೇಜಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2021 ಮಾರ್ಚ್ 15ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿವೇಶನದಲ್ಲಿ ಮುಂದಿನ ಆರು ತಿಂಗಳಲ್ಲಿ ಮೀಸಲಾತಿ ನೀಡುವುದಾಗಿ ಮಾತು ಕೊಟ್ಟಿದ್ದರು.

ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಅಕ್ಟೋಬರ್‌ನಲ್ಲಿ ಸಭೆ ಕರೆದು ಒಂದಿಷ್ಟು ಕಾಲಾವಕಾಶ ಕೇಳಿಕೊಂಡು, ಬಜೆಟ್ ಅಧಿವೇಶನ ಮುಕ್ತಾಯವಾಗುವುದೊಳಗೆ ತೀರ್ಮಾನಿಸಲಾಗುವುದು ಎಂದಿದ್ದರು. ಆದರೆ, ಕಳೆದ 10 ದಿನಗಳಿಂದ ನಡೆಯುತ್ತಿರುವ ಅಧಿವೇಶನದಲ್ಲಿ ಮೀಸಲಾತಿ ನೀಡುವ ಕುರಿತು ಚರ್ಚೆಗಳಾಗಿಲ್ಲ.

ಮೀಸಲಾತಿ ಕುರಿತು ಜಯಪ್ರಕಾಶ್ ಹೆಗ್ಡೆ ಹಿಂದುಳಿದ ಆಯೋಗದ ವರದಿಯನ್ನೇ ಸರ್ಕಾರ ಪಡೆದುಕೊಂಡಿಲ್ಲ. ಹೀಗಾಗಿ, ಸರ್ಕಾರಕ್ಕೆ ಏಪ್ರಿಲ್ 14ರವರೆಗೆ ಅಂತಿಮ ಗಡುವು ನೀಡಲಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿರುವ ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ..

ಸುಮಾರು ಒಂದು ವರ್ಷ ಮೂರು ತಿಂಗಳಿಂದ ಮೀಸಲಾತಿ ಹೋರಾಟ ಜೀವಂತವಾಗಿದೆ. ಸಮುದಾಯದ ಮುಖಂಡರಲ್ಲಿ ಪ್ರಾಮಾಣಿಕತೆ ಹೆಚ್ಚಿದ್ದು, ಹೋರಾಟ ಹತ್ತಿಕ್ಕಲು ಸಾಕಷ್ಟು ಪ್ರಯತ್ನಗಳಾದರೂ ಸಾಧ್ಯವಾಗಿಲ್ಲ. ಸರ್ಕಾರಕ್ಕೆ ನೀಡಿದ್ದ ಕಾಲಾವಕಾಶ ಮುಕ್ತಾಯವಾಗಿದೆ.

ಇನ್ನಷ್ಟು ಸಮಯ ನೀಡಿದರೆ ವಿಧಾನಸಭೆ ಚುನಾವಣೆ ಬಂದು ನೀತಿ ಸಂಹಿತೆ ಎನ್ನುತ್ತಾರೆ. ಅಂಬೇಡ್ಕರ್ ಜಯಂತಿಯೊಳಗೆ ಸರ್ಕಾರ ನಮಗೆ ಮೀಸಲಾತಿ ನೀಡಿದಿದ್ದರೆ ಎಲ್ಲರೂ ಕೂಡಲಸಂಗಮಕ್ಕೆ ಬನ್ನಿ, ಅಲ್ಲಿಂದಲೇ ಉಗ್ರ ಹೋರಾಟ ನಡೆಸೋಣ ಎಂದು ಕರೆ ಕೊಟ್ಟರು.

ಅಧಿವೇಶನದಲ್ಲಿರುವ ಸಮುದಾಯದ ಜನಪ್ರತಿನಿಧಿಗಳು ಮೀಸಲಾತಿ ಕುರಿತು ಧ್ವನಿ ಎತ್ತಬೇಕು, ಸಮುದಾಯದ ಋಣದಲ್ಲಿರುವ ಇತರೆ ಸಮುದಾಯದ ಜನಪ್ರತಿನಿಧಿಗಳು ಬೆಂಬಲ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಮತ್ತೊಂದು ಮಠದ ಬಗ್ಗೆ ಗೊತ್ತಿಲ್ಲ :ರಾಜ್ಯದಲ್ಲಿ ಕೂಡಲಸಂಗಮದಲ್ಲಿ ಸ್ಥಾಪನೆಯಾಗಿರುವ ಲಿಂಗಾಯತ ಪಂಚಮಸಾಲಿ ಪೀಠ ಹೊರತುಪಡಿಸಿ ಪಂಚಮಸಾಲಿ ಸಮುದಾಯದ ಬೇರೆ ಪೀಠ ಇರುವುದು ನನಗೆ ಗೊತ್ತಿಲ್ಲ ಎನ್ನುವ ಮೂಲಕ ಇತರೆ ಪಂಚಮಸಾಲಿ ಪೀಠಗಳ ಸ್ವಾಮೀಜಿಗಳ ಮೇಲೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಷಡ್ಯಂತ್ರ ನಡೆಯುತ್ತಿದೆ :ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಮೀಸಲಾತಿ ಕುರಿತು ಹಲವು ಸ್ವಾಮೀಜಿಗಳು ತಪ್ಪು ಸಲಹೆ ನೀಡಿ ಷಡ್ಯಂತ್ರ ಮಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ ಈಗ ಮೀಸಲಾತಿ ಕೊಟ್ಟರೆ ಅದರ ಯಶಸ್ಸು ಕೂಡಲಸಂಗಮ ಸ್ವಾಮೀಜಿಗೆ ಸೇರುತ್ತದೆ ಎಂಬ ಕಾರಣಕ್ಕೆ ಇನ್ನಷ್ಟು ದಿನ ತಡವಾಗುವಂತೆ ತಪ್ಪಿಸುತ್ತಿದ್ದಾರೆ. ಅಂತಹ ಸ್ವಾಮೀಜಿಗಳನ್ನು ಸಮುದಾಯದ ಜನ ಸಾರ್ವಜನಿಕವಾಗಿ ಬಹಿಷ್ಕರಿಸಬೇಕು. ಹೋರಾಟ ಕೊನೆಯ ಹಂತಕ್ಕೆ ಬಂದಿದ್ದು, ಬಸವರಾಜ ಬೊಮ್ಮಾಯಿಯವರ ಮೇಲೆ ವಿಶ್ವಾಸವಿದ್ದು, ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಡು ಇಲ್ಲವೇ ಮಡಿ ಹೋರಾಟ : ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಭರವಸೆ ಮೇಲೆ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಿದ್ದೆವು. ಕಣ್ಣು, ಹೃದಯವಿಲ್ಲದ ಸರ್ಕಾರ ಹಿಂದಿನ ಹೋರಾಟಕ್ಕೆ ಬೆಲೆ ಕೊಡಲಿಲ್ಲ. ಸರ್ಕಾರಕ್ಕೆ ಸಾಮೀಜಿಗಳು ನೀಡಿರುವ ಗಡುವು ಮುಗಿದ ನಂತರ ಮಾಡು ಇಲ್ಲವೆ ಮಡಿಯುವ ಹೋರಾಟ ಮಾಡಲಾಗುವುದು. ಮೀಸಲಾತಿ ಆದೇಶ ಪ್ರತಿ ಸಿಗೋವರೆಗೂ ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.

ಇದಕ್ಕೂ ಮುನ್ನ ನಡೆದ ದುಂಡು ಮೇಜಿನ ಸಭೆಯಲ್ಲಿ ಸಮುದಾಯದ ಶಾಸಕರಾದ ಅರವಿಂದ ಬೆಲ್ಲದ, ಸಿದ್ದು ಸವದಿ, ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪಂಚಮಸಾಲಿ ಗೌಡ, ಮಲೆಗೌಡ, ದೀಕ್ಷಾ ಲಿಂಗಾಯತ ಸಮುದಾಯದ ಮುಖಂಡರು ಮುಂದಿನ ಹೋರಾಟದ ಬಗ್ಗೆ ಸಲಹೆ ನೀಡಿದರು.

ಇದನ್ನೂ ಓದಿ:ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆಪ್​ನ ಭಗವಂತ್​ ಮಾನ್

For All Latest Updates

TAGGED:

ABOUT THE AUTHOR

...view details