ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಕುರಿತು ಹೋರಾಟ ನಡೆಸುತ್ತಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದರು. ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಶ್ರೀಗಳು, ದೇವೇಗೌಡರ ಆರೋಗ್ಯ ವಿಚಾರಿಸಿದರು. ನಂತರ ಪಂಚಮಸಾಲಿ ಸಮಾಜದ ಮೀಸಲಾತಿ ಕುರಿತಂತೆ ಗೌಡರ ಜೊತೆ ಚರ್ಚೆ ನಡೆಸಿದ್ದರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಹೆಚ್ಡಿಕೆ "ದೇವೇಗೌಡರ ಆರೋಗ್ಯ ವಿಚಾರಿಸಲು ಶ್ರೀಗಳು ಬಂದಿದ್ದರು. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ತಿಳಿಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯ ಅವರು ಎಲ್ಲಿ ನಿಲ್ಲುತ್ತಾರೆ ಎಂಬುದರ ಬಗ್ಗೆ ಲಘುವಾಗಿ ಮಾತಾಡಲ್ಲ. ರಾಷ್ಟ್ರೀಯ ಪಕ್ಷದ ಮುಖಂಡರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆದವರು. ರಾಷ್ಟ್ರೀಯ ಪಕ್ಷದಲ್ಲಿ ಈ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳಿಂದ ಅವರ ಶಕ್ತಿ ಕುಗ್ಗಿದಿಯಾ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ಈ ರೀತಿ ಆಗಬಾರದಿತ್ತು ಎಂಬುದು ನನ್ನ ಅಭಿಪ್ರಾಯ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ನಿಂತರು ನಮಗೆ ಸಮಸ್ಯೆ ಇಲ್ಲ. ಮತದಾರರು ಜೆಡಿಎಸ್ ಪರ ಇದ್ದಾರೆ. ಯಾರು ಅಭ್ಯರ್ಥಿ ನಿಲ್ತಾರೆ ಮುಖ್ಯ ಅಲ್ಲ. ನಮ್ಮ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ಶ್ರೀನಾಥ್ ಕೆಲಸ ಆರಂಭ ಮಾಡಿದ್ದಾರೆ. ಕಳೆದ ಏಳೆಂಟು ತಿಂಗಳಿನಿಂದ ಸಂಘಟನೆ ನಡೆಯುತ್ತಿದೆ. ಅಲ್ಲಿ ವಿಶೇಷವಾಗಿ ಯಾರು ಪ್ರಮುಖ ಅಭ್ಯರ್ಥಿ ಬರ್ತಾರೆ ಅಂತಾ ಲೆಕ್ಕಾಚಾರ ಹಾಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.