ಬೆಂಗಳೂರು : ನನ್ನನ್ನು ಬಿಜೆಪಿಯಿಂದ ಹೊರಹಾಕಲು ಯಾರಿಗೂ ತಾಕತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ನನ್ನ ನಿಲುವು ಅಚಲವಾಗಿದೆ. ಬಿಜೆಪಿ ಪುನರುತ್ಥಾನ ಮಾಡಲು ನಾನು ಹೋರಾಟ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಸಿಎಂ ವಿರುದ್ಧ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ನನ್ನ ಎಲ್ಲಾ ಪ್ರಶ್ನೆಗಳನ್ನ ಕೇಳಿದ್ದೇನೆ. ವಿಜಯೇಂದ್ರ ಸೇರಿ 21 ಜನರ ಕುಟುಂಬ ಮಾರಿಷಸ್ಗೆ ಹೋಗಿತ್ತು.
ಅವರೆಲ್ಲಾ ಅಲ್ಲಿ ಹೋಗಿದ್ದು ಏತಕ್ಕೆ? ಇದು ರಾಜ್ಯದ ಜನರಿಗೆ ಗೊತ್ತಾಗಬೇಕು. ವಿಜಯೇಂದ್ರ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ನಲ್ಲೇ ಓಡಾಟ ಮಾಡುತ್ತಿದ್ದಾರೆ. ಸಿಎಂ ಕೂಡ ಸಂಚಾರ ಮಾಡಲ್ಲ, ಇಷ್ಟು ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.
ಸಿಎಂ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ಸಾಕ್ಷಿ ಏನಿದೆ ಅಂತಾ ಕೇಳಿದ್ದಾರೆ. ಸಾಕ್ಷಿ ಇಲ್ಲೇ ಇದೆ ನೋಡಿ ಎಂದು ದಾಖಲೆ ತೋರಿಸಿದ ಯತ್ನಾಳ್, ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಸಾಕ್ಷಿ ಸಮೇತ ಮಾಹಿತಿ ಎತ್ತಿ ಹಿಡಿದಿದ್ದಾರೆ.
ಎರಡು ಪ್ರಕರಣದಲ್ಲಿ ಸಿಎಂಗೆ ₹25 ಸಾವಿರ ದಂಡ ವಿಧಿಸಿದೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಬಂಧನ ಮಾಡದಂತೆ ಸ್ಟೇ ತಂದಿದ್ದಾರೆ. ಶಿವರಾಮ್ ಕಾರಂತ್ ಬಡವಾಣೆ ಕೇಸ್ ಹಾಗೂ ಗಂಗೇನಹಳ್ಳಿ ಡಿನೋಟಿಪಿಕೇಶನ್ ಕೇಸ್ನ ತೀರ್ಪನ್ನ ಹೈಕೋರ್ಟ್ ಎತ್ತಿ ಹಿಡಿದಿದೆ ಎಂದರು.
ನಾನು ವ್ಯಾಪಕ ಭ್ರಷ್ಟಾಚಾರವನ್ನ ಉಲ್ಲೇಖ ಮಾಡಿದ್ದೇನೆ. ನಿಮ್ಮ ಅಳಿಯ ಕ್ಯಾಬಿನೆಟ್ ದರ್ಜೆಯಲ್ಲಿದ್ದಾರೆ. ನಿಮ್ಮ ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ. ನಿಮ್ಮ ಕುಟುಂಬಕ್ಕೆ ಸೇರಿದ 10-15 ಜನ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾರೆ. ಹಾಗಾದರೆ, ರಾಜ್ಯದಲ್ಲಿ ನಡೆಯುತ್ತಿರುವುದು ಏನು ಎಂದು ಪ್ರಶ್ನಿಸಿದರು.