ಕರ್ನಾಟಕ

karnataka

ETV Bharat / state

'ಸಿಎಂ ನಾಪತ್ತೆ': ಯತ್ನಾಳ್​ ಹೇಳಿಕೆಗೆ ರೇಣುಕಾ ಗರಂ...ಪಟ್ಟು ಹಿಡಿದು ಮಾತಿಗೆ ಅವಕಾಶ ಗಿಟ್ಟಿಸಿದ ಪಾಟೀಲ್​ - ಬಸನಗೌಡ ಪಾಟೀಲ್​ ಯತ್ನಾಳ್​

ವಿಧಾನಸಭೆಯಲ್ಲಿ ಇಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು, ಮುಖ್ಯಮಂತ್ರಿಗಳು ಪಂಚಮಸಾಲಿ ಸಮುದಾಯವನ್ನು ನಿರ್ಲಕ್ಷಿಸಿ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿದರು. ಇದರಿಂದ ಆಕ್ರೋಶಗೊಂಡ ಎಂ.ಪಿ.ರೇಣುಕಾಚಾರ್ಯ ಈ ಹೇಳಿಕೆಯನ್ನು ನೇರವಾಗಿ ಖಂಡಿಸಿದರು.

Assembly_Session
ಯತ್ನಾಳ್​ ಹೇಳಿಕೆಗೆ ಗರಂ ಆದ ರೇಣುಕಾಚಾರ್ಯ

By

Published : Mar 10, 2021, 2:20 PM IST

ಬೆಂಗಳೂರು: ಮುಖ್ಯಮಂತ್ರಿಗಳು ಪಂಚಮಸಾಲಿ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ. ಅವರು ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಾಡಿದ ಮಾತು ಆಡಳಿತ ಪಕ್ಷದ ನಾಯಕರಿಬ್ಬರ ನಡುವೆ ಸಂಘರ್ಷಕ್ಕೆ ಕಾರಣವಾಯಿತು.

ವಿಧಾನಸಭೆಯಲ್ಲಿ ಇಂದು ಬಸನಗೌಡ ಪಾಟೀಲ್ ಯತ್ನಾಳ್ ಅವರಾಡಿದ ಮಾತನ್ನು ಆಡಳಿತ ಪಕ್ಷದವರೇ ಆದ ಎಂ.ಪಿ.ರೇಣುಕಾಚಾರ್ಯ ನೇರವಾಗಿ ಖಂಡಿಸಿದರು. ಆಡಳಿತ ಪಕ್ಷದವರಾಗಿ ನೀವೇ ಮುಖ್ಯಮಂತ್ರಿಗಳ‌ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದರೆ, ಇವರು ಮಾಡಿದ್ದನ್ನೆಲ್ಲ ನೋಡಿಕೊಂಡು ಸುಮ್ಮನಿರಬೇಕಾ ಎಂದು ಯತ್ನಾಳ್ ಆರ್ಭಟಿಸಿದರು.

ಯತ್ನಾಳ್​ ಹೇಳಿಕೆಗೆ ಗರಂ ಆದ ರೇಣುಕಾಚಾರ್ಯ

ಪಂಚಮಸಾಲಿ ಸಮುದಾಯದ ಭಾವನೆ ಹೇಳಲು ಎದ್ದು ನಿಂತರೆ ಅದರ ವಿರುದ್ಧ ರೇಣುಕಾಚಾರ್ಯ ಏಕೆ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಈ ಇಬ್ಬರು ನಾಯಕರ ನಡುವೆ ಹೀಗೆ ವಾಕ್ಸಮರ ಆರಂಭವಾದಾಗ ಸದನದ ಸದಸ್ಯರು ಮೂಕ ವಿಸ್ಮಿತರಾಗಿ ಕುಳಿತಿದ್ದರು. ಬಜೆಟ್ ಮೇಲಿನ ಕಾರ್ಯಕಲಾಪ ಆರಂಭಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಜ್ಜಾದಾಗ ಈ ಘಟನೆ ನಡೆಯಿತು.

ಬಜೆಟ್ ಮೇಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತು ಆರಂಭಿಸಲಿ ಎಂದು ಸ್ಪೀಕರ್ ಹೇಳಿದಾಗ ಬಸನಗೌಡ ಪಾಟೀಲ್ ಯತ್ನಾಳ್ ಎದ್ದು ನಿಂತರು. ಪಂಚಮಸಾಲಿ ಲಿಂಗಾಯತರನ್ನು ಹಿಂದುಳಿದ ಪ್ರವರ್ಗ 2 ಎ ಗೆ ಸೇರಿಸುವ ಬಗ್ಗೆ ನನಗೆ ಮಾತನಾಡಲು ಅವಕಾಶ ಕೊಡಿ ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.

ಇದನ್ನು ಓದಿ: ಮೀಸಲಾತಿ ವಿಚಾರ: ಬೊಮ್ಮಾಯಿಗೆ ಪ್ರಶ್ನೆ ಹಾಕಿದ ಸಿದ್ದರಾಮಯ್ಯ- VIDEO

ಧರಣಿಗೆ ಮುಂದಾದ ಯತ್ನಾಳ್: ಮುಂದುವರಿದು ಮಾತನಾಡಿ, ಈ ವಿಷಯದಲ್ಲಿ ನಿಮಗೆ ಸಮಾಧಾನವಾಗುವ ಉತ್ತರ ಕೊಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ ಮಾತನಾಡಲು ನನಗೆ ಅವಕಾಶ ನೀಡಿ ಎಂದು ಧರಣಿಗೆ ಮುಂದಾದರು. ಈ ಹಂತದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಈಗ ಯತ್ನಾಳ್ ಅವರು ಬಹುಮುಖ್ಯ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಅವರಿಗೆ ಮಾತನಾಡಲು ಅವಕಾಶ ಕೊಡಿ ಎಂದು ಕೋರಿಕೊಂಡರು.

ಈ ಹಂತದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ತಮ್ಮ ಅಮೂಲ್ಯ ಸಮಯವನ್ನು ಸಿದ್ದರಾಮಯ್ಯ ಅವರು ನನಗೆ ಬಿಟ್ಟುಕೊಟ್ಟಿದ್ದಾರೆ. ನಮ್ಮ ಸಮುದಾಯದ ಮೇಲೆ ಅವರಿಗಿರುವ ಪ್ರೀತಿಗೆ ಇದು ಸಾಕ್ಷಿ ಎಂದರು. ಆದರೆ, ಮುಖ್ಯಮಂತ್ರಿಗಳು ಯಾಕೆ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮುದಾಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಈ ಧೋರಣೆ ಸರಿಯಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದಾಗ ಶಾಸಕ ಎಂ.ಪಿ.ರೇಣುಕಾಚಾರ್ಯ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.

ಆಡಳಿತ ಪಕ್ಷದವರಾಗಿ ನೀವೇ ಮುಖ್ಯಮಂತ್ರಿಗಳ ಬಗ್ಗೆ ಟೀಕಿಸಿದರೆ ಹೇಗ್ರೀ ಎಂದವರು ಯತ್ನಾಳ್ ವಿರುದ್ದ ಕಿಡಿಕಾರಿದರೆ, ಮಾಡುವುದನ್ನೆಲ್ಲ ನೋಡಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಯತ್ನಾಳ್​ ತಿರುಗೇಟು ನೀಡಿದರು.

ABOUT THE AUTHOR

...view details