ಬೆಂಗಳೂರು : ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಪ್ರತಿಪಕ್ಷದ ಧರಣಿ, ಗದ್ದಲದ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತರ ನೀಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಸಂತಾಪ ಸೂಚನೆ ಮುಕ್ತಾಯವಾಗುತ್ತಿದ್ದಂತೆಯೇ ಮಹತ್ವದ ಸಾರ್ವಜನಿಕ ವಿಷಯದ ಮೇಲೆ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ಯತ್ನಾಳ್ ಹೇಳಿಕೆ ಕುರಿತು ಚರ್ಚೆಗೆ ಸಿದ್ದರಾಮಯ್ಯ ಪಟ್ಟು ಹಿಡಿದರು. ಶಾಸಕ ಬಸನಗೌಡ ಪಾಟೀಲ್ ಅವರು ದೊರೆಸ್ವಾಮಿ ಒಬ್ಬರಿಗೆ ಅವಮಾನ ಮಾಡಿಲ್ಲ. ಯತ್ನಾಳ್ ಹೇಳಿಕೆಯಿಂದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಲಾಗಿದೆ. ಇದಕ್ಕೆ ಸಚಿವರಾದ ಸಿ.ಟಿ. ರವಿ, ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನೊಟೀಸ್ ಕೊಡಿ, ಹೊರಗಿನ ವಿಚಾರಗಳು ಸದನದಲ್ಲಿ ಚರ್ಚೆ ಬೇಡ ಎಂದು ಹೇಳಿ ಚರ್ಚೆಗೆ ಅವಕಾಶ ನೀಡಬಾರದೆಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು. ಸ್ಪೀಕರ್ ತಮ್ಮ ವಿಶೇಷಾಧಿಕಾರ ಬಳಸಿ ಚರ್ಚೆಗೆ ಅವಕಾಶ ಕೊಡಲಿ ಎಂದು ಸಿದ್ದರಾಮಯ್ಯ ಪಟ್ಟುಹಿಡಿದರು.
ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಇದರ ಮಧ್ಯೆಯೇ ಸಿದ್ದರಾಮಯ್ಯ ಮಾತು ಮುಂದುವರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಅದರ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಪಟ್ಟುಹಿಡಿದರು. ಆಗ ಮಧ್ಯಪ್ರವೇಶಿಸಿದ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನನ್ನನ್ನು ಸದನದಲ್ಲಿ ಎದ್ದು ನಿಲ್ಲುವಂತೆ ಮಾಡಬೇಡಿ. ಗಂಭೀರವಾದ ವಿಚಾರದ ಬಗ್ಗೆ ಪ್ರಸ್ತಾಪಿಸಲು ಸಿದ್ದರಾಮಯ್ಯ ಕೇಳಿದ್ದಾರೆ. ಆದರೆ, ಅಜೆಂಡಾದಲ್ಲಿ ಅದು ಇಲ್ಲ. ಈಗ ಸರ್ಕಾರದ ಉತ್ತರದ ಬಳಿಕ ಈ ಬಗ್ಗೆ ಗಮನಿಸುತ್ತೇನೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗಿ ಸಿಎಂ ಉತ್ತರ ಕೊಟ್ಟಮೇಲೆ ವಿಷಯ ಪ್ರಸ್ತಾಪಿಸಬಹುದು ಎಂದು ಹೇಳಿದರು.