ಕರ್ನಾಟಕ

karnataka

ETV Bharat / state

ಬಡ್ಡಿ ದರ ಇಳಿಸಿದಾಗ ಸಾಲಗಾರರಿಗೂ ಮಾಹಿತಿ ನೀಡಬೇಕು : ಹೈಕೋರ್ಟ್ ಆದೇಶ - ಬ್ಯಾಂಕ್​ಗಳಿಗೆ ಹೈಕೋರ್ಟ್​ ಆದೇಶ

ಬ್ಯಾಂಕ್​ಗಳು ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿದಾಗ ಸುತ್ತೋಲೆಯನ್ನು ಗ್ರಾಹಕರಿಗೆ ತಲುಪಿಸಬೇಕೆಂದು ಪ್ರಕರಣವೊಂದರ ಕುರಿತು ಹೈಕೋರ್ಟ್ ಆದೇಶ ಹೊರಡಿಸಿದೆ.

High Court order
ಹೈಕೋರ್ಟ್ ಆದೇಶ

By

Published : Jan 29, 2022, 9:45 PM IST

ಬೆಂಗಳೂರು:ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಕಡಿತ ಮಾಡಿದಾಗ ಆ ಕುರಿತು ಬರೀ ನೋಟಿಸ್ ಬೋರ್ಡಿನಲ್ಲಿ ಹಾಕಿದರೆ ಸಾಲದು. ಈ ವಿಷಯವನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಬಡ್ಡಿ ದರ ಕಡಿತದ ಕುರಿತು ಬ್ಯಾಂಕ್ ಸುತ್ತೋಲೆ ಹೊರಡಿಸಿದ ದಿನದಿಂದ ಅದರ ಪ್ರಯೋಜನ ನೀಡಿಲ್ಲವೆಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:ಬೆಂಗಳೂರಿನ ಬಿ.ಎಸ್. ಶೇಖರ್ ಎಂಬುವವರು 2007ರಲ್ಲಿ ಕೆನರಾ ಬ್ಯಾಂಕ್​​ನಿಂದ ಶೇ 11.75ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದಿದ್ದರು. ಬ್ಯಾಂಕ್ 2010ರಲ್ಲಿ ಜುಲೈ 1ರಿಂದ ಅನ್ವಯವಾಗುವಂತೆ ಬಡ್ಡಿ ದರವನ್ನು ಶೇ 8.25ಕ್ಕೆ ಇಳಿಸಿತ್ತು. ಈ ಮಾಹಿತಿ ಅರ್ಜಿದಾರರಿಗೆ ತಿಳಿದಿರಲಿಲ್ಲ. ತಡವಾಗಿ ಮಾಹಿತಿ ಸಿಕ್ಕಿದ್ದರಿಂದ 2017ರ ಜನವರಿ 24ರಂದು ಬ್ಯಾಂಕ್​ಗೆ ಲಿಖಿತ ಮನವಿ ಸಲ್ಲಿಸಿ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಕೋರಿದ್ದರು.

ಶೇಖರ್ ಮನವಿ ಪರಿಗಣಿಸದ ಬ್ಯಾಂಕ್ ಅವರು ಅರ್ಜಿ ಸಲ್ಲಿಸಿದ ದಿನದಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡುವುದಾಗಿ ತಿಳಿಸಿ, ಅದರಂತೆ ಕ್ರಮ ಜರುಗಿಸಿದ್ದರು. ಬ್ಯಾಂಕ್​ನ ಈ ಕ್ರಮ ಪ್ರಶ್ನಿಸಿ ಶೇಖರ್ ಬ್ಯಾಂಕ್ ಓಂಬುಡ್ಸಮನ್​​ಗೆ ದೂರು ನೀಡಿದ್ದರು. ದೂರು ಪರಿಶೀಲಿಸಿದ ಓಂಬುಡ್ಸಮನ್ ಅರ್ಜಿದಾರರ ಕೋರಿಕೆಯಲ್ಲಿ ಹುರುಳಿಲ್ಲ ಎಂದು ವಜಾ ಮಾಡಿದ್ದರು.

ಇದನ್ನೂ ಓದಿ: ಇದು ರೇಪ್​ ಕೇಸ್​.. ಸರ್ಕಾರಿ ಉದ್ಯೋಗಿ ಎಂಬ ಕಾರಣಕ್ಕೆ ಆರೋಪಿಗೆ ಜಾಮೀನು ನೀಡಲಾಗದು ಎಂದ ಹೈಕೋರ್ಟ್

ಬ್ಯಾಂಕ್ ಹಾಗೂ ಓಂಬುಡ್ಸ್ ಮನ್ ಕ್ರಮ ಪ್ರಶ್ನಿಸಿ ಹೈಕೋರ್ಟ್​​​​​​ನಲ್ಲಿ ಶೇಖರ್​ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, 2010ರಿಂದ ಅನ್ವಯವಾಗುವಂತೆ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಬ್ಯಾಂಕ್​ಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬ್ಯಾಂಕ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ವಿಭಾಗೀಯ ಪೀಠದ ತೀರ್ಪು:ಬ್ಯಾಂಕ್​​ ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ಪೀಠ, ಪ್ರಕರಣದಲ್ಲಿ ಬ್ಯಾಂಕ್ ನಿಲುವು ತೃಪ್ತಿಕರವಾಗಿಲ್ಲ. ಬಡ್ಡಿದರ ಕಡಿತ ಮಾಡಿದ ಕುರಿತು ಬ್ಯಾಂಕಿನ ನೋಟಿಸ್ ಬೋರ್ಡ್​​​​​ನಲ್ಲಿ ಹಾಕಿದರೆ ಅದು ಪ್ರಚಾರವಾಗುವುದಿಲ್ಲ. ಬಹುತೇಕ ಗ್ರಾಹಕರಿಗೆ ಆ ಕುರಿತು ಮಾಹಿತಿಯೇ ತಲುಪುವುದಿಲ್ಲ. ಹೀಗಾಗಿ ಸುತ್ತೋಲೆ ಹೊರಡಿಸಿದಾಗ ಪ್ರತಿಯನ್ನು ಗ್ರಾಹಕರಿಗೆ ಖುದ್ದಾಗಿ ಕಳುಹಿಸಿದಾಗ ಮಾತ್ರ ಅದು ಮಾಹಿತಿ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಬ್ಯಾಂಕ್ 2010ರಲ್ಲಿ ಯಾವ ದಿನಾಂಕದಿಂದ ಬಡ್ಡಿ ದರ ಕಡಿತದ ಪ್ರಯೋಜನ ಲಭ್ಯ ಎಂದು ಸುತ್ತೋಲೆ ಹೊರಡಿಸಿತ್ತೋ ಅಂದಿನಿಂದ ಅನ್ವಯವಾಗುವಂತೆ ಅರ್ಜಿದಾರರಿಗೆ ಬಡ್ಡಿದರ ಕಡಿತದ ಪ್ರಯೋಜನವನ್ನು ವರ್ಗಾಯಿಸಬೇಕು ಎಂದು ಆದೇಶಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details