ಬೆಂಗಳೂರು:ವೃದ್ಧೆಯೊಬ್ಬರ ಬ್ಯಾಂಕ್ ಖಾತೆಗೆ ಹೆಚ್ಚಿನ ಪಿಂಚಣಿ ಪಾವತಿಸಿದ ನಂತರ ಖಾತೆಯನ್ನು ಸ್ಥಗಿತಗೊಳಿಸಿದ ಬ್ಯಾಕ್ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಹಿರಿಯ ನಾಗರಿಕರ ಬಗ್ಗೆ ಕಾಳಜಿ ಹಾಗೂ ಸಹಾನುಭೂತಿ ತೋರಬೇಕಿದೆ ಎಂದು ಕೋರ್ಟ್ ಕಿವಿಮಾತು ಹೇಳಿದೆ.
ಖಾತೆಯನ್ನು ಸ್ಥಗಿತಗೊಳಿಸಿದ ಬ್ಯಾಂಕ್ ಕ್ರಮ ಪ್ರಶ್ನಿಸಿ ಬೆಂಗಳೂರಿನ ವಿಜಯನಗರದ ನಿವಾಸಿ ವೃದ್ಧೆ ನಳಿನಿ ದೇವಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಈ ಸೂಚನೆ ನೀಡಿದರು. ಜತೆಗೆ ಹೆಚ್ಚುವರಿಯಾಗಿ ಪಾವತಿಸಿದ ಪಿಂಚಣಿ ಮೊತ್ತವನ್ನು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಪಿಂಚಣಿದಾರ ಮಹಿಳೆಯಿಂದ ಹಣ ವಸೂಲು ಮಾಡಬಾರದು ಎಂದು ನಿರ್ದೇಶಿಸಿದೆ.
2016 ರಲ್ಲಿ ಖಾತೆ ಸ್ಥಗಿತಗೊಳಿಸಲಾಗಿದೆ. ಅಂದಿನಿಂದ ಬ್ಯಾಂಕ್ ಕಚೇರಿಗೆ ಪದೇ ಪದೇ ಅಲೆದರೂ ಸಮಸ್ಯೆ ಬಗೆಹರಿದಿಲ್ಲ. ಪಿಂಚಣಿದಾರರ ಧ್ವನಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳು ಕಿವುಡಾಗಬಾರದು. ಹಿರಿಯ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟಿತು.