ಬೆಂಗಳೂರು: ಗ್ರಾಹಕನ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದ ಉದ್ಯೋಗಿಯನ್ನು ವಜಾಗೊಳಿಸಿದ್ದ ಬ್ಯಾಂಕ್ ಆsದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಬ್ಯಾಂಕ್ ಉದ್ಯೋಗಿಗಳ ವಂಚನೆ ಪ್ರಕರಣಗಳು ಜಾಗತಿಕ ಸಮಸ್ಯೆಯಾಗಿವೆ ಎಂದು ಅಭಿಪ್ರಾಯಪಟ್ಟಿದೆ.
ತನ್ನನ್ನು ಉದ್ಯೋಗದಿಂದ ವಜಾಗೊಳಿಸಿದ ಬ್ಯಾಂಕ್ ಹಾಗೂ ಈ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಉದ್ಯೋಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ ಬ್ಯಾಂಕ್ ನಿಂದ ವಜಾಗೊಂಡಿರುವ ಆರೋಪಿತ ಉದ್ಯೋಗಿ ಗ್ರಾಹಕನ ಹಣ ಡ್ರಾ ಮಾಡಿರುವುದನ್ನು ಆತನೇ ಒಪ್ಪಿಕೊಂಡಿದ್ದಾನೆ. ಹೀಗಾಗಿ ಬ್ಯಾಂಕ್ ಆತನನ್ನು ವಜಾಗೊಳಿಸಿರುವ ಹಾಗೂ ಬ್ಯಾಂಕ್ ನಿರ್ಣಯನ್ನು ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಕ್ರಮ ಸರಿ ಇವೆ. ಬ್ಯಾಂಕ್ ಉದ್ಯೋಗಳ ವಂಚನೆಗಳು ಜಾಗತಿಕ ಸಮಸ್ಯೆಯಾಗಿವೆ. ಹಣಕಾಸು ಸಂಸ್ಥೆಗಳಲ್ಲಿನ ವಂಚನೆ ಪ್ರಕರಣಗಳನ್ನು ನಿರ್ಲಕ್ಷಿಸುವಂತಿಲ್ಲ. ಅಂತಹ ಕೃತ್ಯಗಳನ್ನು ಕಠಿಣವಾಗಿ ಹತ್ತಿಕ್ಕುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.