ಬೆಂಗಳೂರು:ಬ್ಯಾಂಕ್ನಲ್ಲಿ ಅಡವಿಟ್ಟ ಆಸ್ತಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಂಡಲ್ಲಿ ಬ್ಯಾಂಕ್ ಹೊಸ ಭೂ ಸ್ವಾಧೀನ ಕಾಯಿದೆ 2013ರಡಿ ಪರಿಹಾರ ಕೋರಿ ಮನವಿ ಮಾಡಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಡಿಬಿಎಸ್ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯಪೀಠ, ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ನೇರ ರೈಲು ಮಾರ್ಗ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ (ಎಸ್ಎಲ್‌ಎಒ)ಗೆ ಅರ್ಜಿದಾರರ ಕ್ಲೇಮನ್ನು ಮಾನ್ಯ ಮಾಡಬಹುದಾಗಿದೆ ಎಂದು ಆದೇಶಿಸಿದೆ. ಅಗತ್ಯ ದಾಖಲೆಗಳೊಂದಿಗೆ ಅರ್ಜಿದಾರರು ಹೊಸ ಭೂ ಸ್ವಾಧೀನ ಕಾಯಿದೆಯಡಿ ಪರಿಹಾರ ಕೋರಿ ಸಲ್ಲಿಸಿರುವ ಮನವಿಯನ್ನು ಚಿತ್ರದುರ್ಗದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದೆ ಮಂಡಿಸುವಂತೆ ನ್ಯಾಯಪೀಠ ಸೂಚನೆ ನೀಡಿದೆ.
ಆಸ್ತಿ ಅಡವಿಟ್ಟಿದ್ದ ಪ್ರಕರಣಗಳಲ್ಲಿ ಭೂ ಸ್ವಾಧೀನ ಮಾಡಿಕೊಂಡರೆ ಆಗ ಆಸ್ತಿ ವರ್ಗಾವಣೆ ಕಾಯಿದೆ 1882ರ ಸೆಕ್ಷನ್ 73 ಅನ್ನು ಅನ್ವಯಿಸಬೇಕಾಗುತ್ತದೆ. ಆ ಕಾಯಿದೆಯ ಉಪನಿಯಮ(2)ರಲ್ಲಿ ಆಸ್ತಿಯನ್ನು ಅಡವಿಟ್ಟುಕೊಂಡಿರುವವರು ಅಡವಿಟ್ಟಿರುವ ಹಣಕ್ಕೆ ಬದಲಾಗಿ ಹಣ ಮರುಪಾವತಿಗೆ ಹಕ್ಕು ಮಂಡಿಸಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರ ಬ್ಯಾಂಕ್ 2017ರಲ್ಲಿ ಚಂದ್ರಶೇಖರ ರೆಡ್ಡಿ ಎಂಬುವರಿಗೆ ಸಾಲವನ್ನು ನೀಡಿತ್ತು. ಅವರು ಸಾಲಕ್ಕೆ ಶ್ಯೂರಿಟಿಯಾಗಿ ಹಿರಿಯೂರಿನ ಸಮೀಪದ ಜಾಗ ಅಡವಿಟ್ಟಿದ್ದರು. ಈ ಮಧ್ಯೆ ಆ ಜಾಗವನ್ನು ರೈಲ್ವೆ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂ ಸ್ವಾಧೀನದ ನಂತರ ಬ್ಯಾಂಕ್ ವಿಶೇಷ ಭೂ ಸ್ವಾಧೀನಾಧಿಕಾರಿಗೆ ಹಲವು ಮನವಿಗಳನ್ನು ಸಲ್ಲಿಸಿದ್ದರು.
2022ರ ಜು.25ರಂದು ಸಹ ಒಂದು ಅರ್ಜಿಯನ್ನು ಸಲ್ಲಿಸಿ ತಮ್ಮ ಹಕ್ಕು ಮನವಿಯನ್ನು ಪರಿಗಣಿಸುವಂತೆ ಕೋರಿದ್ದರು. ಚಂದ್ರಶೇಖರ ರೆಡ್ಡಿ ಸಾಲ ಮರುಪಾವತಿ ಮಾಡದೇ ಎನ್ಪಿಎ ಆಗಿರುವುದರಿಂದ ಆ ಹಣಕ್ಕೆ ಬದಲಾಗಿ ಭೂ ಸ್ವಾಧೀನ ಮಾಡಿಕೊಂಡಿರುವುದಕ್ಕೆ ಹೊಸ ಭೂಸ್ವಾಧೀನ ಕಾಯಿದೆ 2013ರ ಅಡಿಯಲ್ಲಿ ಪರಿಹಾರವನ್ನು ತಮಗೆ ನೀಡಬೇಕೆಂದು ಮನವಿ ಮಾಡಿದ್ದರು. ಆ ಮನವಿಯನ್ನು ವಿಶೇಷ ಭೂಸ್ವಾಧೀನಾಧಿಕಾರಿ ಪರಿಗಣಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಹೈಕೋರ್ಟ್ ಮೊರೆ ಹೋಗಿತ್ತು.
20 ಸಾವಿರ ರೂ. ದಂಡ ವಿಧಿಸಿದ್ದ ಹೈಕೋರ್ಟ್:ಭೂಮಿ ಮಾರಾಟ ಮಾಡಿ ನಾಲ್ಕೂವರೆ ದಶಕಗಳು ಕಳೆದ ಬಳಿಕವೂ ಅದರ ಮೇಲಿನ ಹಕ್ಕು ಸಾಧಿಸುವುದಕ್ಕಾಗಿ ಪ್ರಕರಣ ದಾಖಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾರ್ಚ್ 25ರಂದು ರದ್ದುಗೊಳಿಸಿತ್ತು. ಜೊತೆಗೆ ಅರ್ಜಿದಾರರಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿತ್ತು.
ತಮ್ಮ ಭೂಮಿಯ ಸ್ವಾಧೀನ ಸಂಬಂಧ 1980ರ ಸೆಪ್ಟೆಂಬರ್ 30ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಸೆಕ್ಷನ್ 19 (1)ರ ಹೊರಡಿಸಿದ್ದ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಜೀವನಹಳ್ಳಿಯ ಎ.ರಾಮಮೂರ್ತಿ, ಎ.ಅಶ್ವಥ್ಮೂರ್ತಿ ಮತ್ತು ಕೆ.ಉಮಾಶಂಕರ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತ್ತು.
ಭೂಸ್ವಾಧೀನ, ಪುನರ್ವಸತಿ, ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯಿದೆಯ ಸೆಕ್ಷನ್ 24 (2) ರದ್ದಾಗಿರುವುದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ಅಡಿ 1980ರಲ್ಲಿ ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದತಿ ಕೋರಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಭೂಮಿಯನ್ನು ವಿಳಂಬವಾಗಿ ಪರಿವರ್ತಿಸಿ, ಹಲವು ಮನೆ ನಿರ್ಮಿಸಿದ್ದು, ಸೈಟ್ ಪಡದಿರುವವರು ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿಗೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಿಲ್ಲ. 94 ಕೊಳಗೇರಿ ನಿವಾಸಿಗಳಿಗೆ ಭೂಮಿಯ ಮಾಲೀಕರು ನಿವೇಶನ ಹಂಚಿಕೆ ಮಾಡುವ ವಿವಾದ ರಹಿತವಾಗಿತ್ತು.
ಅದಾಗ್ಯೂ, ಆಕ್ಷೇಪಾರ್ಹವಾದ ಭೂಮಿಯು ತಮ್ಮ ವಶದಲ್ಲಿದೆ ಎಂದು ಅರ್ಜಿದಾರರು ಹೇಳುತ್ತಿರುವುದು ನ್ಯಾಯಾಲಯಕ್ಕೆ ಹೇಳುತ್ತಿರುವ ಸುಳ್ಳಲ್ಲದೇ ಬೇರೇನು ಅಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿತ್ತು. ನಾಲ್ಕು ದಶಕಗಳ ಹಿಂದೆಯೇ ಆಕ್ಷೇಪಾರ್ಹವಾದ ಭೂಮಿ ವಶಪಡಿಸಿಕೊಂಡು ಅದನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿದೆ. ಇದು ಲೇಔಟ್ ಅಭಿವೃದ್ಧಿಪಡಿಸಿ, ಸಮಾಜದ ಕೆಳ ಸ್ಥಳದಲ್ಲಿರುವ ಸಮುದಾಯ 138 ಮಂದಿಗೆ ಇಲ್ಲಿ ನಿವೇಶನ/ಮನೆ ಹಂಚಿಕೆ ಮಾಡಿದೆ.
ಫಲಾನುಭವಿಗಳಿಗೆ ಮೊದಲನೇ ಅರ್ಜಿದಾರ ನಿವೇಶನ ಹಂಚಿಕೆ ಪತ್ರ ನೀಡಿರುವ ಚಿತ್ರ ಒದಗಿಸಲಾಗಿದೆ. ಇದನ್ನು ಅರ್ಜಿದಾರರು ನಿರಾಕರಿಸಿಲ್ಲ. ಅಲ್ಲದೇ, ನಿವೇಶನ ಪಡೆದಿರುವವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಏಕೆ ಮಾಡಿಲ್ಲ ಎಂಬುದಕ್ಕೆ ಅರ್ಜಿದಾರರು ಉತ್ತರಿಸಿಲ್ಲ. ಹೀಗಾಗಿ, ಅರ್ಜಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದಿದ್ದ ನ್ಯಾಯಾಲಯವು ಅರ್ಜಿದಾರರಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಆರು ವಾರಗಳಲ್ಲಿ ಅದನ್ನು ಪಾವತಿಸಬೇಕಿದೆ. ಇದನ್ನು ಉಲ್ಲಂಘಿಸಿದರೆ ಪ್ರತಿ ವಾರ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಆದೇಶದಲ್ಲಿ ಹೇಳಿತ್ತು.
ಇದನ್ನೂ ಓದಿ:ಎಲ್ಲಾ ಲಂಚ ಪ್ರಕರಣಗಳ ತನಿಖೆಗೆ ಎಸ್ಐಟಿಗೆ ವಹಿಸುವಂತೆ ಪಿಐಎಲ್.. ಶ್ರೀರಾಮ ಸೇನೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್