ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿಯಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮೃತ್ ಪಾಲ್ ಅವರಿಗೆ ಜಾಮೀನು ನೀಡಲು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಅಮೃತ್ ಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 51ನೇ ಹೆಚ್ಚುವರಿ ನಗರ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಾಧೀಶ ಯಶವಂತ ಕುಮಾರ್ ಅವರು ಮಂಗಳವಾರ ತೀರ್ಪು ನೀಡಿ ಜಾಮೀನು ಅರ್ಜಿ ವಜಾಗೊಳಿಸಿದರು.
ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಅಮೃತ್ ಪಾಲ್ ಅವರು ಪಿಎಸ್‌ಐ ಹಗರಣದಲ್ಲಿ 35ನೇ ಆರೋಪಿಯಾಗಿದ್ದಾರೆ. ನೇಮಕಾತಿ ಅಕ್ರಮ ಪ್ರಕರಣ ಬಗ್ಗೆ
ಸಿಐಡಿಯು ದೋಷಾರೋಪ ಪಟ್ಟಿ ಸಲ್ಲಿಸಬೇಕಿದ್ದು, ಈ ಸಂದರ್ಭದಲ್ಲಿ ಪಾಲ್ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂಥ ಸಾಧ್ಯತೆಗಳಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದು ಇನ್ನೂ ಬಾಕಿಯಿರುವುದರಿಂದ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲವೆಂದು ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದೆ.