ಬೆಂಗಳೂರು : ಕಳೆದ ಜುಲೈ 3ರಂದು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಸದ್ಯ ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಪತಿಯೇ ತನ್ನ ಪತ್ನಿಯ ಶೀಲ ಶಂಕಿಸಿ ಸ್ನೇಹಿತನ ಜೊತೆಗೂಡಿ ಕೊಲೆಗೈದಿರುವುದಾಗಿ ಪೊಲೀಸರು ಹೇಳಿದ್ದಾರೆ. ಮೃತ ಮಹಿಳೆಯನ್ನು ನಗೀನಾ ಖಾನಂ ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಮೃತ ಮಹಿಳೆಯ ಗಂಡ ಮೊಹಮ್ಮದ್ ರಫೀಕ್ ಹಾಗೂ ಕೊಲೆಗೆ ಸಹಕರಿಸಿದ ಪ್ರಜ್ವಲ್ ಎಂಬವರನ್ನು ಕೆಂಗೇರಿ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ.
ಎರಡು ಮದುವೆಯಾದ್ರು ಅಕ್ರಮ ಸಂಬಂಧ: ಪತ್ನಿಯ ಕೊಂದು ಸುಟ್ಟು ಹಾಕಿದ ಪತಿ ಸೇರಿ ಇಬ್ಬರು ಅಂದರ್ ಘಟನೆ ವಿವರ :ಆರೋಪಿ ರಫೀಕ್ ಮೂಲತಃ ಯಾದಗಿರಿ ಜಿಲ್ಲೆಯವನಾಗಿದ್ದು, ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಮೃತ ನಗೀನಾ ಕೂಡ ಬೆಂಗಳೂರಿನಲ್ಲಿಯೇ ವಾಸವಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಪರಸ್ಪರ ಒಪ್ಪಿಗೆ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇವರ ವಿವಾಹ ನಡೆದಿತ್ತು. ಮದುವೆಯಾದ ಆರಂಭದಲ್ಲಿ ಇಬ್ಬರ ನಡುವೆ ಒಳ್ಳೆ ಪ್ರೀತಿ, ವಿಶ್ವಾಸವಿತ್ತು. ಆದರೆ ಇತ್ತೀಚಿಗೆ ರಫೀಕ್ ಗೆ ಪತ್ನಿ ನಗೀನಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಶುರುವಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ನಗೀನಾ ಪರ ಪುರುಷನ ಜೊತೆಗಿರುವುದನ್ನು ಕಣ್ಣಾರೆ ಕಂಡಿದ್ದನಂತೆ. ಅಂದಿನಿಂದ ನಗೀನಾಗೆ ಒಂದು ಗತಿ ಕಾಣಿಸಬೇಕು ಎಂದು ರಫೀಕ್ ನಿರ್ಧರಿಸಿದ್ದ.
ರಫೀಕ್ ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ 5 ವರ್ಷಗಳ ಹಿಂದೆ ರಫೀಕ್ ಗೆ ಪ್ರಜ್ವಲ್ ಎಂಬಾತನ ಗೆಳೆತನವಾಗಿ ತುಂಬಾ ಆತ್ಮೀಯರಾಗಿದ್ದರು. ಹೀಗಾಗಿ ತನ್ನ ಹೆಂಡತಿ ಪರಪುರುಷನ ಜೊತೆ ಚಕ್ಕಂದ ಆಡುತ್ತಿದ್ದಾಳೆ. ಆಕೆಗೆ ಒಂದು ಗತಿ ಕಾಣಿಸಬೇಕು ಎಂದು ರಫೀಕ್ ಪ್ರಜ್ವಲ್ ಬಳಿ ಹೇಳಿದ್ದನಂತೆ. ಇಬ್ಬರೂ ಸೇರಿ ನಗೀನಾಳನ್ನು ಮುಗಿಸಬೇಕು ಎಂದು ಸಂಚು ರೂಪಿಸಿದ್ದರು. ಇದೇ ತಿಂಗಳ 3ರಂದು ನಗೀನಾಗೆ ಕರೆ ಮಾಡಿದ್ದ ರಫೀಕ್ ತಾನು ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಕುಡಿದು ಬಿದ್ದಿದ್ದೇನೆ. ಬಂದು ಕರೆದುಕೊಂಡು ಹೋಗು ಎಂದಿದ್ದ. ಹೀಗಾಗಿ ನಗೀನಾ ರಫೀಕ್ ನನ್ನು ಕರೆದುಕೊಂಡು ಬರಲು ಅಲ್ಲಿಗೆ ತೆರಳಿದ್ದರು. ನಗೀನಾ ಬಂದ ತಕ್ಷಣ ರಫೀಕ್ ಕ್ಯಾತೆ ತೆಗೆದಿದ್ದ. ನನಗೆ ನೀನು ಮೋಸ ಮಾಡಿದ್ದೀಯಾ ಎಂದು ಮನಬಂದಂತೆ ಥಳಿಸಿದ್ದ. ಸ್ಥಳದಲ್ಲಿದ್ದ ಪ್ರಜ್ವಲ್, ರಫೀಕ್ ಜೊತೆ ಸೇರಿ ನಗೀನಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಹೆಣದ ಗುರುತು ಸಿಗಬಾರದು ಎಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ನಗೀನಾಳ ತಂದೆ ತಾಯಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ರಫೀಕ್ ನನ್ನ ಮಗಳನ್ನು ಕೊಂದಿದ್ದಾನೆ ಎಂದು ನಗೀನಾ ತಂದೆ ತಾಯಿ ಆರೋಪಿಸಿದ್ದಾರೆ. ಇತ್ತ ಪರಾರಿಯಾಗಿದ್ದ ರಫೀಕ್ ಗುರುತು ಸಿಗದಂತೆ ತಲೆ, ಮೀಸೆ ,ಗಡ್ಡ ಬೋಳಿಸಿಕೊಂಡಿದ್ದ. ಹೆಂಡತಿ ಮೊಬೈಲ್ ತೆಗೆದುಕೊಂಡು ಹೋಗಿ ಆಗಾಗ ಆಫ್ ಅಂಡ್ ಆನ್ ಮಾಡಿ ಪೊಲೀಸರ ದಾರಿ ತಪ್ಪಿಸಿದ್ದ. ಆದರೆ ಕೆಂಗೇರಿ ಪೊಲೀಸ್ಇನ್ಸ್ ಪೆಕ್ಟರ್ ವಸಂತ್ ಹಾಗೂ ಇತರ ಪೊಲೀಸ್ ಇಬ್ಬಂದಿ ಕಾರ್ಯಾಚರಣೆಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಓದಿ :ಹೆಂಡತಿ ಜೊತೆ ಸೇರಿ ಜನರಿಗೆ ಟೋಪಿ: ಅಮಾನತುಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್