ಬೆಂಗಳೂರು: ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನಗರದ ಪೂರ್ವ ವಿಭಾಗದ ಪೊಲೀಸರು 13 ಮಂದಿ ಆರೋಪಿಗಳನ್ನು ವಿಚಾರಣೆ ಮಾಡುವ ವೇಳೆ ಯುವತಿಯರೊಂದಿಗೆ ಅರೆನಗ್ನವಾಗಿ ಡಾನ್ಸ್ ಮಾಡುತ್ತಿರುವ ಹಲವು ವಿಡಿಯೋ ಪತ್ತೆಯಾಗಿವೆ.
ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಸೇರಿದಂತೆ ಎಲ್ಲರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಬೆಳಕಿಗೆ ಬರುವ ಮುನ್ನ ಆರೋಪಿಗಳು ತಮ್ಮೊಂದಿಗಿದ್ದ ಯುವತಿಯರೊಂದಿಗೆ ಅರೆ ನಗ್ನವಾಗಿ ಮನೆಯೊಂದರಲ್ಲಿ ನೃತ್ಯ ಮಾಡುತ್ತಿರುವ ಹಲವು ವಿಡಿಯೋಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಿಡಿಯೋದಲ್ಲಿ ಏನಿದೆ:?
ಮನೆಯೊಂದರಲ್ಲಿ ಆರೋಪಿ ರಿದಯ್ ಬಾಬು ಇಬ್ಬರು ಯುವತಿಯರೊಂದಿಗೆ ಅರೆನಗ್ನವಾಗಿ ಬಾಂಗ್ಲಾ ದೇಶಿ ಹಾಡುಗಳಿಗೆ ಡಾನ್ಸ್ ಮಾಡಿದ್ದಾನೆ. ಯುವತಿಯರು ಸಹ ರಿದಯ್ ಜೊತೆ ಹಜ್ಜೆ ಹಾಕಿದ್ದಾರೆ. ಡಾನ್ಸ್ ಮಾಡಿರುವ ವಿಡಿಯೋವನ್ನು ಆರೋಪಿಗಳು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ರಿದಯ್ ಬಾಬು ಬಾಂಗ್ಲಾದಲ್ಲಿ ಟಿಕ್ ಟಾಕ್ ವಿಡಿಯೋ ಸ್ಟಾರ್ ಆಗಿ ಜನಪ್ರಿಯಗೊಂಡಿದ್ದಾನೆ. ಯುವತಿಯರನ್ನು ಸೆಳೆದು ಭಾರತದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಕ್ರಮವಾಗಿ ಗಡಿ ದಾಟಿ ವೇಶ್ಯವಾಟಿಕೆ ದಂಧೆಗೆ ನೂಕುತ್ತಿದ್ದ. ಇದುವರೆಗೂ ನೂರಾರು ಯುವತಿಯರನ್ನು ಭಾರತಕ್ಕೆ ಅಕ್ರಮವಾಗಿ ಕರೆ ತಂದಿದ್ದಾನೆ.
ತಪ್ಪೊಪ್ಪಿಕೊಂಡ ಆರೋಪಿಗಳು:
ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಹಣಕಾಸು ವೈಷಮ್ಯದಿಂದಲೇ ಸಂತ್ರಸ್ತೆ ಮೇಲೆ ಸಾಮೂಹಿಕ ಆತ್ಯಾಚಾರ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ. ಕೃತ್ಯ ನಡೆದ ದಿನದಂದು ಎಲ್ಲಾ ಆರೋಪಿಗಳು ಒಂದೇ ಕಡೆ ಇರುವುದು ಟವರ್ ಲೋಕೆಷನ್ ಮೂಲಕ ಗೊತ್ತಾಗಿದೆ.