ನೆಲಮಂಗಲ, ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾದೇಶದ ನಿವಾಸಿಗಳನ್ನ ಪತ್ತೆ ಮಾಡಿದ ಪೊಲೀಸರು 6 ಜನ ಬಾಂಗ್ಲಾ ನಿವಾಸಿಗಳನ್ನ ರೈಲಿನ ಮೂಲಕ ಹೌರಾಕ್ಕೆ ಕಳುಹಿಸಿದರು. ಅಲ್ಲಿಂದ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವ ಕಾರ್ಯ ಕೈಗೊಂಡಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದನಹೊಸಹಳ್ಳಿಯ ಲೇಬರ್ ಶೆಡ್ನಲ್ಲಿ ಅಕ್ರಮವಾಗಿ ಬಾಂಗ್ಲಾ ನಿವಾಸಿಗಳು ವಾಸವಾಗಿದ್ದರು, ಗುಜರಿ ಮತ್ತು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾ ನಿವಾಸಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದರು. ಅವರ ಆಧಾರ್ ಕಾರ್ಡ್ ಮತ್ತು ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾಗ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾ ನಿವಾಸಿಗಳೆಂದು ಧೃಢಪಟ್ಟಿತ್ತು. ಈ 6 ಜನರು ಬಾಂಗ್ಲಾದೇಶದ ನೊಡೆಯಲ್, ಬಾಗೇರಾತ್ ಜಿಲ್ಲೆಯ ನಿವಾಸಿಗಳೆಂದು ತನಿಖೆ ವೇಳೆ ತಿಳಿದು ಬಂದಿತ್ತು.