ಬೆಂಗಳೂರು :ರಾಜಧಾನಿಗೆ ಪರ್ಯಾಯ ಸಾರಿಗೆ ಎಂದು ಕರೆಸಿಕೊಳ್ಳುವ ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಬಿಎಂಆರ್ಸಿಎಲ್ ಮುಂದಾಗಿದೆ. ಈ ಕುರಿತು ಡಿಪಿಆರ್ ಸಿದ್ಧವಾಗಿದ್ದು, 2028ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತದ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ. 45 ಕಿ.ಮೀ ವಿಸ್ತೀರ್ಣದ ಎರಡು ಕಾರಿಡಾರ್ ನಿರ್ಮಿಸಲಾಗುತ್ತಿದೆ. ಬಿಎಂಆರ್ಸಿಎಲ್ ತನ್ನ 2ನೇ ಹಂತದ ಮೆಟ್ರೋ ಯೋಜನೆಯನ್ನು 2024ರೊಳಗೆ ಪೂರ್ಣಗೊಳಿಸುವ ಇರಾದೆ ಹೊಂದಿದೆ. ಆದರೆ, 2 ಹಂತದ ಯೋಜನೆ ಪ್ರಾರಂಭಕ್ಕೂ ಮುನ್ನ 3ನೇ ಹಂತದ ಯೋಜನೆ ನೀಲನಕ್ಷೆ ಸಿದ್ಧಗೊಂಡಿತ್ತು ಎಂದು ಮಾಹಿತಿ ನೀಡಿದ್ದಾರೆ.
ಗುರುವಾರ ಕರಡು ನಕ್ಷೆಯನ್ನು ಪ್ರಕಟಿಸಲಾಗಿದೆ. ಹೊರವಲಯದಲ್ಲಿ ಮೆಟ್ರೋ ಆಗಮನದ ನಿರೀಕ್ಷೆ ಜನರಿಗೆ ಸಂತಸ ಉಂಟುಮಾಡಿದೆ. ಬಹುತೇಕ 2024ರಿಂದ 2025ರ ನಡುವೆ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಪೂರ್ಣವಾಗಲಿದೆ. ಇದೇ ಸಂದರ್ಭದಲ್ಲಿ 3ನೇ ಹಂತದ ಕಾಮಗಾರಿ ಶುರುವಾಲಿದೆ ಎಂದು ಹೇಳಿದ್ದಾರೆ.