ಬೆಂಗಳೂರು: ನವೆಂಬರ್ 25 ಮತ್ತು 26ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ 'ಬೆಂಗಳೂರು ಕಂಬಳ -ನಮ್ಮ ಕಂಬಳ'ಕ್ಕೆ ಪೂರ್ವಭಾವಿಯಾಗಿ ಇಂದು ಕುದಿ ಕಂಬಳಕ್ಕೆ ಚಾಲನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ನಡೆಯಲಿದ್ದು, ಕಂಬಳದ ಜೋಡು ಕರೆಗೆ ರಾಜ ಮಹಾರಾಜರ ಹೆಸರು ಇಡಲಾಗಿದೆ. ಮುಖ್ಯ ವೇದಿಕೆಗೆ ದಿವಂಗತ ನಟ ಪುನೀತ್ ರಾಜಕುಮಾರ್ ಹೆಸರು ಹಾಗೂ ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲಾಗಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಕಂಬಳ ಪಕ್ಷಾತೀತ ಕಾರ್ಯಕ್ರಮ: ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಪುತ್ತೂರಿನ ಶಾಸಕ ಅಶೋಕ್ ರೈ ಮಾತನಾಡಿ, ''ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಬೆಂಗಳೂರು ಕಂಬಳ ಯಾವುದೇ ಪಕ್ಷ, ಸಮುದಾಯಕ್ಕೆ ಸೀಮಿತವಾಗಿಲ್ಲ. ರಾಜಕೀಯ ಕಾರ್ಯಕ್ರಮವಲ್ಲ. ನಮ್ಮ ಕಂಬಳ ಪಕ್ಷಾತೀತ ಕಾರ್ಯಕ್ರಮವಾಗಿದೆ. ಎಲ್ಲ ಪಕ್ಷಗಳ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಎಲ್ಲ ಜಾತಿ ಧರ್ಮದವರೂ ಸಹ ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ" ಎಂದರು.
"ಸುಮಾರು 15 ರಿಂದ 20 ಲಕ್ಷ ಜನ ಕರಾವಳಿ ಭಾಗದವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಅಪೇಕ್ಷೆಯಂತೆ ರಾಜ್ಯ, ರಾಷ್ಟ್ರ ಹಾಗೂ ವಿಶ್ವಕ್ಕೆ ಕಂಬಳವನ್ನ ಪರಿಚಯಿಸುವ ದೃಷ್ಟಿಯಿಂದ ಕಂಬಳ ಆಯೋಜಿಸಿದ್ದೇವೆ. ಸುಮಾರು 220 ಜೊತೆ ಕೋಣಗಳು ನೋಂದಣಿ ಆಗಿದ್ದು, ಆ ಪೈಕಿ 200 ಕೋಣಗಳು ಕಂಬಳದಲ್ಲಿ ಭಾಗಿಯಾಗಲಿವೆ. ನಾಳೆ ಉಪ್ಪಿನಂಗಡಿಯಿಂದ ಕೋಣಗಳು ಹೊರಡಲಿದ್ದು, ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಜೊತೆಯಲ್ಲಿರಲಿದ್ದಾರೆ. ಅಲ್ಲಿಂದ ಹಾಸನಕ್ಕೆ ಬಂದು 4 ಗಂಟೆಗಳ ಕಾಲ ವಿಶ್ರಾಂತಿ ನೀಡಲಾಗುವುದು. ರಾತ್ರಿ 11 ಗಂಟೆಗೆ ಕೋಣಗಳು ಬೆಂಗಳೂರಿಗೆ ತಲುಪಲಿವೆ" ಎಂದು ತಿಳಿಸಿದರು.
''ಸಾಮಾನ್ಯವಾಗಿ 147 ಮೀಟರಿನ ಕರೆ (ಟ್ರ್ಯಾಕ್) ಇರುತ್ತದೆ. ಆದರೆ ಇಲ್ಲಿ 155 ಮೀಟರಿನ ಕರೆ ನಿರ್ಮಿಸಿದ್ದೇವೆ. ಇದೊಂದು ಅತ್ಯುತ್ತಮ ಕರೆ ಎನ್ನಬಹುದು. ಸುಮಾರು 15 ಕೋಣಗಳ ಮಾಲೀಕರು ಬೆಂಗಳೂರು ಕಂಬಳಕ್ಕೆಂದೇ ಕೋಣಗಳನ್ನ ಖರೀದಿಸಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ. ಬೆಂಗಳೂರು ಕಂಬಳ, ಈ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಹ ಕಂಬಳವಾಗಲಿದೆ" ಎಂದು ಮಾಹಿತಿ ನೀಡಿದರು.