ಕರ್ನಾಟಕ

karnataka

ETV Bharat / state

Bangaluru crime: ಹಳೆ ವೈಷಮ್ಯಕ್ಕೆ ಸಹವರ್ತಿ ಕೊಲೆಗೈದಿದ್ದ ನಾಲ್ವರು ಆರೋಪಿಗಳು ಅಂದರ್​ - ಈಟಿವಿ ಭಾರತ್​ ಕನ್ನಡ ನ್ಯೂಸ್

ಬೆಂಗಳೂರಿನಲ್ಲಿ ನಡೆದಿದ್ದ ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಹವರ್ತಿ ಆರೋಪಿಯನ್ನು ಕೊಲೆಗೈದಿದ್ದ ನಾಲ್ವರ ಬಂಧನ
ಸಹವರ್ತಿ ಆರೋಪಿಯನ್ನು ಕೊಲೆಗೈದಿದ್ದ ನಾಲ್ವರ ಬಂಧನ

By ETV Bharat Karnataka Team

Published : Sep 28, 2023, 8:06 PM IST

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಹೇಳಿಕೆ

ಬೆಂಗಳೂರು : ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ನಾಲ್ವರು ಆರೋಪಿಗಳನ್ನು ಬಸವನಗುಡಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ನಗರದ ಬಸವನಗುಡಿಯ ಖಾಜಿ ಸ್ಟ್ರೀಟ್ ನಲ್ಲಿ ಅರ್ಬಾಜ್ ಎಂಬಾತನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆಯಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಕೊಂಡು ತನಿಖೆ ನಡೆಸಿದ ಬಸವನಗುಡಿ ಠಾಣಾ ಪೊಲೀಸರು ಆರೋಪಿಗಳಾದ ಖಾಸೀಫ್, ಶಬ್ಬೀರ್, ಅರ್ಮಾನ್ ಹಾಗೂ ಶಫಿ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೊಲೆಯಾದ ಅರ್ಬಾಜ್ ಹಾಗೂ ಆರೋಪಿಗಳು ಪರಿಚಿತರೇ ಆಗಿದ್ದು, ಸರಗಳ್ಳತನ, ಕಳ್ಳತನ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಕೆಲ ದಿನಗಳ ಹಿಂದೆ ಅರ್ಬಾಜ್​ನನ್ನು ಬಿಟ್ಟು ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆದರೆ ವಿಚಾರಣೆ ಸಂದರ್ಭದಲ್ಲಿ ಅರ್ಬಾಜ್ ಸಹ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಸುಳ್ಳು ಹೇಳಿದ್ದರು.

ಆರೋಪಿಗಳ ಮಾಹಿತಿಯಂತೆ ಪೊಲೀಸರು ಅರ್ಬಾಜ್ ನನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿಸಿದ್ದರು. ತನಗೆ ಸಂಬಂಧವೇ ಇರದ ಪ್ರಕರಣದಲ್ಲಿ ಸಿಲುಕಿಸಿದ್ದರಿಂದ ಸಿಟ್ಟಿಗೆದ್ದ ಅರ್ಬಾಜ್ ಒಬ್ಬನೇ ಜಯನಗರ ಬಳಿ ನಾಲ್ವರ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಸಮಯ ನೋಡಿಕೊಂಡು ಅರ್ಬಾಜ್ ನ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಕಳೆದ ಶುಕ್ರವಾರ ಖಾಜಿ ಸ್ಟ್ರೀಟ್ ಬಳಿ ಓಡಾಡುತ್ತಿದ್ದ ಆತನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದರು.

ರೇಗಿಸುತ್ತಿದ್ದ ಎಂದು ಸಹೋದ್ಯೋಗಿಯನ್ನೇ ಹತ್ಯೆಗೈದ ಆರೋಪಿ ಬಂಧನ‌ :ರೇಗಿಸುತ್ತಿದ್ದ ಎಂಬ ಕಾರಣಕ್ಕೆ ಸಹೋದ್ಯೋಗಿಯನ್ನು ಹತ್ಯೆಗೈದಿದ್ದ ಆರೋಪಿಯನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಲ್ಲಿಕಾರ್ಜುನ (24) ಎಂಬಾತನನ್ನು ಹತ್ಯೆಗೈದಿದ್ದ ಆರೋಪಿ ರಾಜರಥ (25)ನನ್ನು ಬಂಧಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲ್ ಒಂದರ ಬಟ್ಟೆಯಂಗಡಿಯಲ್ಲಿ ಮಲ್ಲಿಕಾರ್ಜುನ ಹಾಗೂ ರಾಜರಥ ಕ್ಯಾಶಿಯರ್ ಕೆಲಸ ಮಾಡುತ್ತಿದ್ದರು. ಬಟ್ಟೆಗಳ ಹಣಕಾಸಿನ ವಿಚಾರಕ್ಕೆ, ಕ್ಯಾಶ್ ಸರಿಯಾಗಿ ಜಮಾ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಸದಾ ರಾಜರಥನನ್ನು ರೇಗಿಸುತ್ತಿದ್ದ. ಇದೇ ವಿಚಾರವಾಗಿ ಸೆಪ್ಟೆಂಬರ್ 26ರಂದು ಸಂಜೆ ಇಬ್ಬರ ನಡುವೆ ಜಗಳವಾಗಿತ್ತು. ಪರಸ್ಪರ ಜಗಳ ವಿಕೋಪಕ್ಕೆ ತಿರುಗಿದಾಗ ರಾಜರಥ ಕತ್ತರಿಯಿಂದ ಮಲ್ಲಿಕಾರ್ಜುನನ ಎದೆಗೆ ಇರಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಮಲ್ಲಿಕಾರ್ಜುನ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಸಿಕೊಂಡ ಯಲಹಂಕ ಠಾಣಾ ಪೊಲೀಸರು ಸದ್ಯ ಆರೋಪಿ ರಾಜರಥನನ್ನ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಬೆಳಗಾವಿ: ಹಣಕಾಸು ವಿಚಾರವಾಗಿ ಇಬ್ಬರು ಸೈನಿಕರ ಜಗಳ, ಗುಂಡಿನ ದಾಳಿಯಿಂದ ಓರ್ವನಿಗೆ ಗಾಯ

ABOUT THE AUTHOR

...view details