ಕರ್ನಾಟಕ

karnataka

ETV Bharat / state

'ಮುಂದಿನ 10 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟು'

ಬೆಂಗಳೂರಿನ ಜನಸಂಖ್ಯೆ ಮುಂದಿನ ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಹೇಳಿದರು.

BBMP Special Commissioner Dr. Trilokchandra More about this source textSource text required for additional translation information Send feedback
ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ

By

Published : Nov 18, 2022, 9:15 AM IST

ಬೆಂಗಳೂರು: ಈಗ 1.30 ಕೋಟಿ ಇರುವ ನಗರದ ಜನಸಂಖ್ಯೆಯು ಮುಂದಿನ ಹತ್ತು ವರ್ಷಗಳಲ್ಲಿ 2.50 ಕೋಟಿ ತಲುಪಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಹೇಳಿದ್ದಾರೆ. ಅವೈಜ್ಞಾನಿಕ ನಗರೀಕರಣ ಮತ್ತು ಅತಿಕ್ರಮಣಗಳಿಂದಾಗಿ ನಮ್ಮ ಮುಂದೆ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಬೃಹದಾಕಾರವಾಗಿವೆ. ಇವುಗಳನ್ನು ಬಗೆಹರಿಸಲು ನಿರಂತರ ನಿಗಾ ವ್ಯವಸ್ಥೆ ಇರಬೇಕಾದ ಜರೂರಿದೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಸಮಾವೇಶದ 2ನೇ ದಿನವಾದ ಗುರುವಾರ 'ಒನ್‌ ಹೆಲ್ತ್ ಮತ್ತು ಸಾಂಕ್ರಾಮಿಕಗಳ ತಡೆ' ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಬೇರೆಬೇರೆ ಕಾರಣಗಳಿಂದ ನಗರಗಳತ್ತ ವಲಸೆ ಬರುತ್ತಲೇ ಇದ್ದಾರೆ. ಆದರೆ, ನಮ್ಮ ನಗರಗಳ ಧಾರಣಾಶಕ್ತಿ ಬರಿದಾಗಿದೆ. ಬೆಂಗಳೂರಿನಂತಹ ಬೃಹತ್‌ ನಗರಗಳಲ್ಲಿ ಜನರ ಆರೊಗ್ಯವನ್ನು ಕಾಪಾಡಬೇಕೆಂದರೆ ಸರಿಯಾದ ನೀತಿ ಮತ್ತು ಆಡಳಿತಗಳು ಪ್ರಮುಖವಾಗಿವೆ ಎಂದರು.

ಆರೋಗ್ಯ ಎಂದರೆ ಕೇವಲ ಮನುಷ್ಯಕೇಂದ್ರಿತವಲ್ಲ. ನಾವು ಇದರಲ್ಲಿ ಪರಿಸರ, ಪ್ರಾಣಿ ಮತ್ತು ಅರಣ್ಯಗಳೂ ಕೂಡ ಒಳಗೊಳ್ಳಬೇಕು. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯ ಸೇರಿದಂತೆ ಹಲವು ಪ್ರಾಣಿಜನ್ಯ ರೋಗಗಳನ್ನು ಎದುರಿಸುತ್ತಿದ್ದೇವೆ. ಹೀಗೆ ಪ್ರಾಣಿಗಳಿಂದ ಹಬ್ಬುವ ರೋಗಗಳ ಪ್ರಮಾಣ ಶೇ.75ರಷ್ಟಿದ್ದು, ಇದು ಕಳವಳಕಾರಿ ಎಂದು ಅವರು ಹೇಳಿದರು.

ನಮ್ಮ ನಗರಗಳಲ್ಲಿ ತ್ಯಾಜ್ಯ, ಮಾಲಿನ್ಯ, ಧೂಳು, ಇಂಗಾಲದ ಕಾರುವಿಕೆ ಎಲ್ಲವೂ ಅಂಕೆ ಮೀರಿವೆ. ಇವುಗಳನ್ನು ಬಗೆಹರಿಸಲು ಎಷ್ಟೇ ಪ್ರಯತ್ನಪಟ್ಟರೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇವು ಬಗೆಹರಿಯಬೇಕೆಂದರೆ ವಾರ್ಡ್ ಮತ್ತು ಸಮುದಾಯಗಳ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ನಾವು ದುಷ್ಪರಿಣಾಮಗಳಿಗೆ ಒಳಗಾಗಬೇಕಾಗುತ್ತದೆ ಎಂದು ನುಡಿದರು.

ಇದೇ ಗೋಷ್ಠಿಯಲ್ಲಿ ಮಾತನಾಡಿದ ಡಾ.ಫರಾ ಇಷ್ತಿಯಾಕ್‌, ನಮ್ಮಲ್ಲಿರುವ ನಗರೀಕರಣದ ಸ್ವರೂಪವೇ ಹಲವು ಸಮಸ್ಯೆಗಳ ಮೂಲ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಧಾರದ ಮೇಲೆ ನಗರೀಕರಣದ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಿಸಿಕೊಳ್ಳಬೇಕಾದ ತುರ್ತು ನಮ್ಮೆದುರಿಗಿದೆ. ಮುಖ್ಯವಾಗಿ ಎಲ್ಲ ನಗರಗಳಲ್ಲೂ ಅಲ್ಲಿರುವ ಕೆರೆಕಟ್ಟೆ ಮತ್ತು ಇನ್ನಿತರ ನೀರಿನ ಮೂಲಗಳನ್ನು ಸುಸ್ಥಿತಿಯಲ್ಲಿ ಸಂರಕ್ಷಿಸಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.

ಗೋಷ್ಠಿಯಲ್ಲಿ ಡಾ.ಪರಮೇಶ್‌, ಡಾ.ವರ್ಷಾ ಶ್ರೀಧರ್ ಮತ್ತು ಡಾ.ಸಿಂಧೂರ ಗಣಪತಿ ತಮ್ಮ ವಿಚಾರಗಳನ್ನು ಮಂಡಿಸಿದರು.

ABOUT THE AUTHOR

...view details