ಬೆಂಗಳೂರು:ನಗರದ ಮಹಿಳೆಯರು ಸೆಲ್ಫ್ ಲಾಕ್ಡೌನ್ ಮಾಡಿಕೊಳ್ಳುವ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಮತ್ತು ಅವರ ಕುಟುಂಬಸ್ಥರ ಆರೋಗ್ಯದ ಮೇಲಿರುವ ಪ್ರೀತಿ.
ಕೋವಿಡ್ ವೈರಸ್ ನಗರದಲ್ಲಿ ಮಿತಿಮೀರಿ ಹಬ್ಬುತ್ತಿದೆ. ಆಸ್ಪತ್ರೆಗಳಲ್ಲೂ ಬೆಡ್ ಸಿಗುತ್ತಿಲ್ಲ. ಪರಿಸ್ಥಿತಿ ಕೈಮೀರಿದ ಸ್ಥಿತಿ ಇದ್ದು, ನಮ್ಮ ಕುಟುಂಬದ ರಕ್ಷಣೆ ನಾವೇ ಮಾಡಬೇಕಿದೆ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿ ಸೆಲ್ಫ್ ಲಾಕ್ಡೌನ್ ಮಾಡಿಕೊಳ್ತೇವೆ ಅಂತ ನಗರದ ಅನೇಕ ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು ನಿರ್ಧಾರಕ್ಕೆ ಬಂದಿದ್ದಾರೆ.
ನಾವಂತೂ ಸೆಲ್ಫ್ ಲಾಕ್ಡೌನ್ ಮಾಡಿಕೊಳ್ತೇವೆ ಎಂದ ಮಹಿಳೆಯರು ಕಾರ್ಯಕ್ರಮಗಳ ನಿರೂಪಕರಾಗಿ ಕೆಲಸ ಮಾಡುತ್ತಿರುವ ರೋಹಿಣಿ ಮಾತನಾಡಿ, ಸರ್ಕಾರ ಲಾಕ್ ಡೌನ್ ಮಾಡಲಿ ಅಂತ ಕಾಯುವುದಿಲ್ಲ. ನನ್ನ ಆರೋಗ್ಯಕ್ಕಾಗಿ, ಮಕ್ಕಳ ಆರೋಗ್ಯಕ್ಕಾಗಿ, ಕುಟುಂಬದ ಆರೋಗ್ಯಕ್ಕಾಗಿ ನಾನೇ ಮೇ 1ರವರೆಗೂ ಸೆಲ್ಫ್ ಲಾಕ್ ಡೌನ್ ಆಗುತ್ತೇನೆ. ಎಲ್ಲ ಕೆಲಸ ಬದಿಗಿಡುತ್ತೇನೆ. ದುಡಿಮೆ ಅನಿವಾರ್ಯ ಹೌದು, ಆದರೆ ದುಡಿದಿದ್ದೆಲ್ಲ ಆಸ್ಪತ್ರೆಗೆ ಸುರಿಯುವ ಪರಿಸ್ಥಿತಿ ಬರುವುದು ಬೇಡ. ಆಸ್ಪತ್ರೆಯಲ್ಲೂ ಈಗ ಬೆಡ್ ಗಳಿಲ್ಲ ಎಂದರು.
ಮತ್ತೊಬ್ಬರು ಯೂಟ್ಯೂಬರ್ ಶ್ವೇತಾ ಸಾಲಿಮಠ್ ಮಾತನಾಡಿ, ಕೊರೊನಾ ಎರಡನೇ ಅಲೆ ಮೊದಲಿಗಿಂತಲೂ ಭಯಾನಕವಾಗಿದೆ. ಸರ್ಕಾರ ಅದರ ಕೆಲಸ, ಜವಾಬ್ದಾರಿಗಳನ್ನು ಮಾಡ್ತಿದೆ. ಆದರೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯನ್ನೂ ಸರ್ಕಾರವೇ ತೆಗೆದುಕೊಳ್ಬೇಕು ಅಂತ ಬಯಸುವುದು ಸರಿಯಲ್ಲ. ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕುಟುಂಬದ ಆರೋಗ್ಯದ ಜವಾಬ್ದಾರಿ ನಾವೇ ಹೊರಬೇಕಿದೆ ಎಂದರು.
ಈ ರೀತಿ ನಗರದ ಹಲವಾರು ಕುಟುಂಬಗಳು ಸೆಲ್ಫ್ ಲಾಕ್ಡೌನ್ ನಿರ್ಧಾರಕ್ಕೆ ಬಂದಿದ್ದು, ಅನಿವಾರ್ಯ ಎಂದಾಗ ಮಾತ್ರ ಹೊರಬರಲು ತೀರ್ಮಾನಿಸಿದ್ದಾರೆ.