ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸದ್ದು ಮಾಡ್ತಿರುವ ಬೆನ್ನಲ್ಲೇ ನಗರ ಪೊಲೀಸರು ಕೂಡ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಇಂದು ಪಶ್ಚಿಮ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿ 61 ಆರೋಪಿಗಳನ್ನ ಬಂಧಿಸಿ 42 ಪ್ರಕರಣಗಳನ್ನು ದಾಖಲಿಸಿದ್ದಾರೆ. 51,555 ಗ್ರಾಂ ತೂಕದ ಗಾಂಜಾ, 600 ಗ್ರಾಂ ಅಫೀಮು, 90 ಗ್ರಾಂ ಬ್ರೌನ್ ಶುಗರ್, 70 ಗ್ರಾಂ ಮಾದಕ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೃಹತ್ ಮಟ್ಟದ ಗಾಂಜಾ ಜಪ್ತಿ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಸಂಜೀವ್ ಪಾಟೀಲ್ ಡ್ರಗ್ಸ್ ಸೇವನೆ ಮಾಡುವವರ ಮೇಲೆ 121ರ ಅಡಿ ಪ್ರಕರಣ ದಾಖಲಿಸಿ ಈವರೆಗೆ 121 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಹಾಗೆ ಇಂದು ಸಿಟಿ ಮಾರ್ಕೆಟ್ ಮತ್ತು ಮೆಟ್ರೋ ಸ್ಟೇಷನ್ ಬಳಿಯ ಪಾರ್ಕಿಂಗ್ ಜಾಗದಲ್ಲಿ ಇಬ್ಬರು ಆಸಾಮಿಗಳು ನಿಷೇಧಿತ ಗಾಂಜಾ ಮತ್ತು ಅಫಿಮನ್ನು ಸಾರ್ವಜನಿಕರಿಗೆ ರಾಜಾರೋಷವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ರಾಜುರಾಮ್, ಸುನೀಲ್‌ಕುಮಾರನ್ನ ಪೊಲೀಸರು ಬಂಧಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ಆರೋಪಿಗಳ ಮನೆಯಿಂದ 3 ಕೋಟಿ 30 ಲಕ್ಷ ಮೌಲ್ಯದ 1 ಕೆ.ಜಿ 280 ಗ್ರಾಂ ಬ್ರೌನ್ ಶುಗರ್, 475 ಗ್ರಾಂ ಅಫಿಮು, 25 ಮತ್ತು 32 ಗ್ರಾಂ ತೂಕದ ಮಾದಕ ಮಾತ್ರೆಗಳು, 3 ಮೊಬೈಲ್ ಫೋನ್, 2 ಬೈಕ್ಅನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಪೆಡ್ಲರ್ಗಳು ಗಾಂಜಾ ಮಾರಾಟ ಮಾಡ್ತಿದ್ರು. ಸದ್ಯ ಪೊಲೀಸರು ಎಲ್ಲೆಡೆ ಕಾರ್ಯಾಚರಣೆ ಶುರು ಮಾಡಿದ್ದೇವೆ. ಬಹುತೇಕ ಆರೋಪಿಗಳನ್ನು ಬಂಧಿಸಿದ್ದು, ಮತ್ತಷ್ಟು ತನಿಖೆ ಮುಂದುವರೆಸಿದ್ದೇವೆ ಎಂದು ಹೇಳಿದರು.